Thursday, 23rd January 2020

Recent News

ದೆಹಲಿ ಅಗ್ನಿ ಅವಘಡ- 11 ಜನರ ಜೀವ ಉಳಿಸಿದ ಫೈರ್ ಮ್ಯಾನ್

– ಗೃಹ ಸಚಿವರಾದಿಯಾಗಿ ಹಲವರಿಂದ ಮೆಚ್ಚುಗೆ

ನವದೆಹಲಿ: ನಗರದ ಕೃಷಿ ಮಾರುಕಟ್ಟೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 43 ಜನ ಸಾವನ್ನಪ್ಪಿದ್ದು, ಈ ನಡುವೆಯೇ ಬೆಂಕಿಯ ಕೆನ್ನಾಲೆಯಿಂದ 11 ಜನರನ್ನು ರಕ್ಷಿಸುವ ಮೂಲಕ ಅಗ್ನಿ ಶಾಮಕ ದಳದ ಸಿಬ್ಬಂದಿಯೊಬ್ಬರು ಹೀರೋ ಆಗಿದ್ದಾರೆ.

ಬೆಂಕಿ ಹೊತ್ತಿಕೊಂಡ ಕಟ್ಟಡಕ್ಕೆ ಮೊದಲು ಪ್ರವೇಶಿಸಿ ರಕ್ಷಣಾ ಕಾರ್ಯ ನಡೆಸಿ, ಅಗ್ನಿಶಾಮಕ ಸಿಬ್ಬಂದಿ ರಾಜೇಶ್ ಶುಕ್ಲಾ ತಮ್ಮ ಶಕ್ತಿ ಮೀರಿ ಕಾರ್ಯನಿರ್ವಹಿಸುವ ಮೂಲಕ 11 ಜನರನ್ನು ರಕ್ಷಿಸಿದ್ದಾರೆ. ಇದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಉತ್ತರ ದೆಹಲಿಯ ಅನಾಜ್ ಮಂಡಿಯ ಫ್ಯಾಕ್ಟರಿಯಲ್ಲಿ ದುರಂತ ಸಂಭವಿಸಿದ್ದು, ಬೃಹತ್ ಬೆಂಕಿಯನ್ನು ಕಂಡು ರಕ್ಷಣಾ ಕಾರ್ಯಕ್ಕೆ ಇಳಿಯಲು ಬಹುತೇಕ ಅಗ್ನಿಶಾಮಕ ಸಿಬ್ಬಂದಿ ಆರಂಭದಲ್ಲಿ ಹಿಂದೇಟು ಹಾಕಿದ್ದರು. ಆದರೆ ಯಾವುದನ್ನೂ ಲೆಕ್ಕಿಸದೆ ಬೆಂಕಿ ಹೊತ್ತಿಕೊಂಡ ಕಟ್ಟಡಕ್ಕೆ ಪ್ರವೇಶಿಸಿ ರಾಜೇಶ್ ಶುಕ್ಲಾ ರಕ್ಷಣಾ ಕಾರ್ಯಚರಣೆ ನಡೆಸಿದ್ದಾರೆ. ಈ ಕಾರ್ಯಚರಣೆಯಲ್ಲಿ ಶುಕ್ಲಾ ಸೇರಿದಂತೆ ಅನೇಕ ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

11 ಜನರನ್ನು ರಕ್ಷಿಸಿದ ಹೀರೋ ಶುಕ್ಲಾ ಅವರಿಗೂ ಸಹ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಸಿಬ್ಬಂದಿಯ ಆರೋಗ್ಯ ವಿಚಾರಿಸಲು ದೆಹಲಿಯ ಗೃಹ ಸಚಿವ ಸತ್ಯೇಂದ್ರ ಜೈನ್ ಅವರು ಎಲ್‍ಎನ್‍ಜೆಪಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ಅಲ್ಲದೆ ಶುಕ್ಲಾ ಅವರು ಮೊದಲು ಕಟ್ಟಡದೊಳಗೆ ಪ್ರವೇಶಿಸಿ 11 ಜನರನ್ನು ರಕ್ಷಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರೇ ನಿಜವಾದ ಹೀರೋ ಎಂದು ಸಂಬೋಧಿಸಿದ್ದಾರೆ.

ಗೃಹ ಸಚಿವ ಸತ್ಯೇಂದ್ರ ಜೈನ್ ಅವರು ಶುಕ್ಲಾ ಅವರ ಫೋಟೋವನ್ನು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಗ್ನಿ ಶಾಮಕ ಸಿಬ್ಬಂದಿ ರಾಜೇಶ್ ಶುಕ್ಲಾ ನಿಜವಾದ ಹೀರೋ. ಬೆಂಕಿ ವ್ಯಾಪಿಸಿದ ಕಟ್ಟಡದೊಳಗೆ ಮೊದಲು ಪ್ರವೇಶಿಸಿ ಕಾರ್ಯಾಚರಣೆ ಪ್ರಾರಂಭಿಸುವ ಮೂಲಕ 11 ಜೀವಗಳನ್ನು ಉಳಿಸಿದ್ದಾರೆ. ಅವರಿಗೆ ಗಂಭೀರ ಗಾಯಗಳಾಗುವವರೆಗೂ ಪ್ರಯತ್ನ ಬಿಡದೆ ಕಾರ್ಯಾಚರಣೆ ನಡೆಸಿದ್ದಾರೆ. ಈ ಧೈರ್ಯಶಾಲಿ ನಾಯಕನಿಗೊಂದು ಸೆಲ್ಯೂಟ್ ಎಂದು ಬರೆದುಕೊಂಡಿದ್ದಾರೆ.

ಕೃಷಿ ಮಾರುಕಟ್ಟೆಯ ಆವರಣದಲ್ಲಿರುವ ಕಟ್ಟಡಕ್ಕೆ ಬೆಳಗ್ಗೆ 5.22ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಘಟನೆಯಲ್ಲಿ 43 ಜನ ಸಾವನ್ನಪ್ಪಿದ್ದಾರೆ. ಫ್ಯಾಕ್ಟರಿಯೊಳಗೆ ಕಾರ್ಮಿಕರು ಮಲಗಿದ್ದ ವೇಳೆ ಬೆಂಕಿ ಹೊತ್ತಿಕೊಂಡಿದ್ದರಿಂದ ತುಂಬಾ ಸಾವು ನೋವು ಸಂಭವಿಸಿದೆ. ಶಾರ್ಟ್ ಸಕ್ರ್ಯೂಟಿನಿಂದ ಅವಘಡ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಅವಘಡ ಸಂಬಂಧ ತನಿಖೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದು, ವಾರದೊಳಗೆ ಸಂಪೂರ್ಣ ವರದಿ ನೀಡುವಂತೆ ಸೂಚಿಸಿದ್ದಾರೆ.

ದುರ್ಘಟನೆ ನಡೆದ ವಿಚಾರ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಸಿಎಂ, ಮೃತಪಟ್ಟ ಪ್ರತಿಯೊಬ್ಬ ಕಾರ್ಮಿಕನ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದ್ದಾರೆ.

ಘಟನೆ ನಡೆದ ಬಳಿಕ ಅರವಿಂದ್ ಕೇಜ್ರಿವಾಲ್ ಸೇರಿದಂತೆ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಗೃಹ ಸಚಿವ ಅಮಿತ್ ಶಾ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *