Connect with us

Cinema

ನಾನು ಯಾವತ್ತೂ ಡ್ರಗ್ಸ್ ಸೇವಿಸಿಲ್ಲ: ದಿಯಾ ಮಿರ್ಜಾ

Published

on

– ತನ್ನ ಮೇಲಿನ ಆರೋಪ ನಿರಾಕರಿಸಿದ ನಟಿ

ಮುಂಬೈ: ಸ್ಯಾಂಡಲ್‍ವುಡ್ ನಂತೆ ಬಾಲಿವುಡ್ ಅಂಗಳದಲ್ಲಿಯೂ ಡ್ರಗ್ಸ್ ಪ್ರಕರಣ ದಿನೇ ದಿನೇ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ನಟಿ ದಿಯಾ ಮಿರ್ಜಾ ಅವರು, ನಾನು ಯಾವತ್ತೂ ಡ್ರಗ್ಸ್ ಸೇವಿಸಿಲ್ಲ ಎಂದು ಹೇಳುವ ಮೂಲಕ ತನ್ನ ಮೇಲಿನ ಆರೋಪಗಳನ್ನು ಅಲ್ಲಗೆಳೆದಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ದಿಯಾ, ನನ್ನ ವಿರುದ್ಧ ಕೇಳಿಬರುತ್ತಿರುವ ಆರೋಪಗಳೆಲ್ಲವೂ ಸುಳ್ಳಾಗಿದ್ದು, ಆಧಾರ ರಹಿತವಾಗಿದೆ. ಅಲ್ಲದೆ ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದೊಂದು ನನ್ನ ವಿರುದ್ಧದ ಪಿತೂರಿಯಾಗಿದೆ ಎಂದಿದ್ದಾರೆ.

ಇಂತಹ ಕುಲ್ಲಕ ವರದಿಗಾರಿಕೆ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತದ್ದಾಗಿದೆ. ಹಲವು ವರ್ಷಗಳ ಕಠಿಣ ಪರಿಶ್ರಮದಿಂದ ನನ್ನ ವೃತ್ತಿ ಜೀವನವನ್ನು ಉತ್ತಮವಾಗಿ ರೂಪಿಸಿಕೊಂಡು ಬಂದಿದ್ದೇನೆ ಎಂದು ಕಿಡಿಕಾರಿದ್ದಾರೆ.

ನನ್ನ ಜೀವನದಲ್ಲಿ ಯಾವುದೇ ರೀತಿಯ ಮಾದಕ ವಸ್ತುಗಳನ್ನು ಎಂದಿಗೂ ಸೇವಿಸಿಲ್ಲ. ಓರ್ವ ಭಾರತದ ಪ್ರಜೆಯಾಗಿ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದೇನೆ. ನನ್ನ ಬೆಂಬಲಕ್ಕೆ ನಿಂತವರಿಗೆಲ್ಲರಿಗೂ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುವುದಾಗಿ ಟ್ವೀಟ್ ನಲ್ಲಿ ದಿಯಾ ಮಿರ್ಜಾ ತಿಳಿಸಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ತನಿಖೆಯ ವೇಳೆ ಡ್ರಗ್ಸ್ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಮಾದಕ ದ್ರವ್ಯ ಸೇವಿಸುತ್ತಾರೆ ಎಂಬ ವಿಚಾರದಡಿಯಲ್ಲಿ ಅನುಜ್ ಕೇಶ್ವಾನಿಯನ್ನು ತನಿಖೆಗೆ ಒಳಪಡಿಸಲಾಗಿತ್ತು. ಈ ವೇಳೆ ದಿಯಾ ಮಿರ್ಜಾ ಹೆಸರು ಕೇಳಿಬಂದಿದ್ದು, ಎನ್‍ಸಿಬಿ ನಟಿಯನ್ನು ತನಿಖೆ ಮಾಡುತ್ತಿದೆ ಎಂದು ಹೇಳಲಾಗಿತ್ತು.

ಡ್ರಗ್ಸ್ ಕೇಸ್ ಗೆ ಸಂಬಂಧಪಟ್ಟಂತೆ ದಿಯಾ ಹಾಗೂ ಅವರ ಮ್ಯಾನೇಜರ್ ನಡುವೆ ನಡೆದ ವಾಟ್ಸಪ್ ಸಂದೇಶಗಳು ಎನ್‍ಸಿಬಿಗೆ ಸಿಕ್ಕಿವೆಯಂತೆ. ಕೇಶ್ವಾನಿ ಗೆಳತಿ ದಿಯಾ ಮ್ಯಾನೇಜರ್ ಎಂಬುದು ಕೂಡ ಬಹಿರಂಗವಾಗಿದ್ದು, 2019ರಲ್ಲಿ ದಿಯಾ ಡ್ರಗ್ಸ್ ಖರೀದಿ ಮಾಡಿರುವ ಬಗ್ಗೆ ಎನ್‍ಸಿಬಿಗೆ ಮಾಹಿತಿ ಸಿಕ್ಕಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿತ್ತು.

Click to comment

Leave a Reply

Your email address will not be published. Required fields are marked *