Connect with us

Chitradurga

ನಮ್ಮ ಸಮುದಾಯಕ್ಕೆ ಮೀಸಲಾತಿ ಪಡೆಯಲು ಆಗದಿದ್ರೆ ರಾಜಕೀಯ ನಿವೃತ್ತಿಗೂ ಸಿದ್ಧ- ಶ್ರೀರಾಮುಲು

Published

on

ಚಿತ್ರದುರ್ಗ: ನಾಯಕ ಸಮುದಾಯಕ್ಕೆ ಅಗತ್ಯ ಮೀಸಲಾತಿ ಪಡೆಯಲು ಆಗದಿದ್ದರೆ ರಾಜಕೀಯ ನಿವೃತ್ತಿಗೂ ಸಿದ್ಧನಿದ್ದೇನೆ ಎಂದು ಆರೋಗ್ಯ ಸಚಿವ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯಕ್ಕೆ ಜನಸಂಖ್ಯೆ ಆಧಾರದಲ್ಲಿ ಶೇ.7.5ರಷ್ಟು ಮೀಸಲಾತಿ ಅತಿ ಅಗತ್ಯವಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಜೊತೆ ಚರ್ಚಿಸಿದ್ದೇನೆ. ಅಲ್ಲದೆ ಶೀಘ್ರದಲ್ಲೇ ಸರ್ಕಾರದಿಂದ ಮೀಸಲಾತಿ ಪಡೆದು ಸಮುದಾಯದ ಋಣ ತೀರಿಸುವೆ. ಅದಕ್ಕಾಗಿ ನನಗೆ ಎರಡೂವರೆ ತಿಂಗಳು ಕಾಲಾವಕಾಶ ನೀಡಿ ಎಂದು ವಾಲ್ಮೀಕಿ ಸಮುದಾಯಕ್ಕೆ ಮನವಿ ಮಾಡಿದರು.

ಕೆಲವರಿಂದ ಊರ ನಾಯಕರು, ವ್ಯಾಸ ನಾಯಕರೆಂದು ಸಮಾಜದಲ್ಲಿ ಒಡಕು ಮೂಡಿಸುವ ಯತ್ನ ನಡೆಯುತ್ತಿದ್ದು, ನಾನು ಮೊಳಕಾಲ್ಮೂರು ಕ್ಷೇತ್ರದಿಂದ ಕಣಕ್ಕಿಳಿದಾಗ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದರು. ಜೊತೆಗೆ ಕೆಲವರು ನಮ್ಮ ಸಮುದಾಯವನ್ನು ಬಳಸಿಕೊಂಡು ಕಸ ಎಸೆದಂತೆ ಎಸೆಯುತ್ತಾರೆ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡಿದರು. ಆದರೆ ನನ್ನ ಸಮುದಾಯ ಗೊಂದಲಕ್ಕೀಡಾಗದೆ ನನ್ನ ಪರವಾಗಿ ನಿಂತಿತು ಎಂದು ಪರೋಕ್ಷವಾಗಿ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ವಿರುದ್ಧ ವಾಗ್ದಾಳಿ ನೆಡೆಸಿದರು.

ಹಾಗೆಯೇ ನಾವು ಯಾವುದೇ ಪಕ್ಷದಲ್ಲಿರಲಿ ಆ ಪಕ್ಷಕ್ಕೆ ಕೆಲಸ ಮಾಡೋಣ. ಆದರೆ ಸಮುದಾಯದ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಾಗೋಣ ಎಂದು ಇತರೆ ಪಕ್ಷಗಳಲ್ಲಿರುವ ಸಮುದಾಯದ ಮುಖಂಡರಿಗೆ ಕರೆ ನೀಡಿದರು. ನಮ್ಮ ಸಮುದಾಯದವರು 6 ತಿಂಗಳಿಗೆ ಒಮ್ಮೆಯಾದರೂ ರಾಜನಹಳ್ಳಿಯ ವಾಲ್ಮೀಕಿ ಮಠಕ್ಕೆ ಭೇಟಿ ನೀಡಿ ಸಂಘಟಿತರಾಗಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು. ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಅಧಿಕಾರ ಕಳೆದುಕೊಂಡು ಹತಾಶರಾಗಿ ಮಾತನಾಡುತ್ತಿದ್ದಾರೆ. ಸರ್ಕಾರ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಾರ್ಯ ಕೈಗೊಂಡಿದೆ. ಸಿದ್ದರಾಮಯ್ಯನವರಿಗೆ ಸರ್ಕಾರದ ಕಾರ್ಯ ಸಹಿಸಲಾಗುತ್ತಿಲ್ಲ. ಮತ್ತೆ ಅಧಿಕಾರ ಪಡೆಯಲು ಹತಾಶರಾಗಿ ಮಾತನಾಡುತ್ತಿದ್ದಾರೆ. ಅವರ ಮಾತಿಗೆ ಗೌರವ ಕೊಡುವ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರಕ್ಕೆ ಸರ್ವಾಧಿಕಾರಿ ಧೋರಣೆ ಇಲ್ಲ ಎಂದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರ ಕಳೆದುಕೊಂಡ ಬಳಿಕ ನಮ್ಮ ಸರ್ಕಾರದ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಪಂಚೇಂದ್ರಿಯ ಇಟ್ಟುಕೊಂಡು ಅವರೇನು ಮಾಡಿದರು ಅರ್ಥಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.