Tuesday, 12th November 2019

ದೊಡ್ಡವರ ಜಮೀನು ಬೇಡ-ಸಣ್ಣವರ ಜಮೀನು ಬಿಡಲ್ಲ

ಬೆಳಗಾವಿ: ಅಭಿವೃದ್ದಿ ಹೆಸರಿನಲ್ಲಿ ಜಮೀನು ಕಸಿದುಕೊಂಡು ಕೆಲಸ ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪ್ರಭಾವಿಗಳ ಒತ್ತಡಕ್ಕೆ ಮಣಿದು ಕೇವಲ ಸಣ್ಣ ರೈತರ ಜಮೀನಿಗೆ ಕಣ್ಣ ಹಾಕಿದೆ ಎಂಬ ಆರೋಪ ಕೇಳಿ ಬಂದಿದೆ. ಶಾಸಕಿ ಹೆಬ್ಬಾಳ್ಕರ್ ಕೂಡ ಈ ವಿಷಯದಲ್ಲಿ ಸೈಲೆಂಟ್ ಆಗಿರುವುದು ರೈತರನ್ನ ಕೆರಳಿಸುವಂತೆ ಮಾಡಿದೆ.

ಬೆಳಗಾವಿ ತಾಲೂಕಿನ ಹೊರವಲಯದಲ್ಲಿ ಬೆಳಗಾವಿ-ಗೋವಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 4ರ ಬೈಪಾಸ್ ರಸ್ತೆ ನಿರ್ಮಾಣವಾಗುತ್ತಿದೆ. ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರೈತರಿಂದ ಜಮೀನು ಕಬ್ಜಾ ಪಡೆದುಕೊಂಡು ಕೆಲಸ ಮಾಡುತ್ತಿದೆ. ಬೆಳಗಾವಿಯ ಪ್ರತಿಷ್ಠಿತ ಉದ್ಯಮಿಗಳು ಹಾಗೂ ರಾಜಕಾರಣಿಗಳ ಜಮೀನಿನ ಜಾಗದಲ್ಲಿ ನಿರ್ಮಾಣವಾಗಬೇಕಿದ್ದ ರಸ್ತೆ ಸಣ್ಣ ರೈತರ ಜಮೀನಿನಲ್ಲಿ ನಿರ್ಮಾಣವಾಗುತ್ತಿದೆ ಎನ್ನಲಾಗುತ್ತಿದೆ. ಇದು ಸಣ್ಣ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ರೈತರು ತಮ್ಮ ಭೂಮಿ ಉಳಿಸಿಕೊಳ್ಳೋಕೆ ಇಷ್ಟೆಲ್ಲ ಹೋರಾಟ ಮಾಡುತ್ತಿದ್ರೆ, ಇತ್ತ ಸ್ಥಳೀಯ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತ್ರ ಒಂದು ದಿನವೂ ಇವ್ರ ಹೋರಾಟಕ್ಕೆ ಸಾಥ್ ಕೊಟ್ಟಿಲ್ಲ. ಹೀಗಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಭಾವಿ ಉದ್ಯಮಿಗಳ ಪರ ನಿಂತ್ರಾ ಅನ್ನೋ ಪ್ರಶ್ನೆ ಕಾಡುತ್ತಿದೆ. ಪ್ರಭಾವಿಗಳ ಜಮೀನುಗಳು ಇಲ್ಲಿ ಇರೋದ್ರಿಂದ ಹೋರಾಟ ಮಾಡುವುದರಿಂದ ಹೆಬ್ಬಾಳ್ಕರ್ ಗೆ ತೊಂದರೆ ಆಗುತ್ತೆ ಎಂಬ ಕಾರಣಕ್ಕೆ ಇಲ್ಲಿ ಬಂದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಈಗಾಗಲೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಂದ ಕಾಮಗಾರಿಯ ನೀಲ ನಕ್ಷೆಯನ್ನು ತರಿಸಿಕೊಂಡು ನೋಡಿದ್ದೇನೆ. ಫಲವತ್ತಾದ ಭೂಮಿ ಬಿಟ್ಟು ಬೇರೆ ಸ್ಥಳದಲ್ಲಿ ಬೈಪಾಸ್ ನಿರ್ಮಾಣ ಮಾಡಲು ಸಾಧ್ಯವಾಗುತ್ತಾ ಎಂಬ ಚರ್ಚೆಗಳು ನಡೆದಿವೆ. ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಮತ್ತೊಂದು ಮಾಡುವ ಜಾಯಮಾನ ನಮ್ಮದಲ್ಲ. ಭೂಮಿ ಕಳೆದುಕೊಂಡವರು ಎಲ್ಲರೂ ರೈತರೇ ಎಂದು ತಿಳಿಸಿದ್ದಾರೆ.

ಪ್ರಭಾವಿಗಳ ಜಮೀನು ಉಳಿಸಿಕೊಳ್ಳಲು ಕಾಮಗಾರಿಯ ಪ್ಲಾನ್ ಬದಲಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ, ಸಚಿವ ಸತೀಶ್ ಜಾರಕಿಹೊಳಿ ಹೇಳುತ್ತಾರೆ.

ಜಮೀನಿನ ಅಕ್ಕಪಕ್ಕ ಕೆಲವು ಕಡೆಗಳಲ್ಲಿ ಬರಡು ಭೂಮಿ ಇದ್ದರೂ ರೈತರ ಭೂಮಿಯನ್ನ ಪಡೆದುಕೊಳ್ಳುವ ಮುಂಚೆ ಸ್ವಲ್ಪ ಇಲಾಖೆಯವರು ಯೋಚಿಸಿ ಕೆಲಸ ಆರಂಭಿಸಿದ್ರೇ ರೈತರು ಬದುಕುತ್ತಿದ್ದರು. ಒಟ್ಟಿನಲ್ಲಿ ರೈತರಿಗೆ ಸರಿಯಾದ ಪರಿಹಾರ ಆದರೂ ಕೊಟ್ಟು ಬದುಕಿಸುವ ಕೆಲಸ ಇಲಾಖೆ ಮಾಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Leave a Reply

Your email address will not be published. Required fields are marked *