Thursday, 12th December 2019

ಡಿಕೆಶಿ ಎರಡನೇ ಸಿದ್ಧಾರ್ಥ್ ಆಗಬಾರದು: ನಂಜಾವಧೂತ ಸ್ವಾಮೀಜಿ

– ಸಮೂದಾಯ ಹತ್ತಿಕ್ಕುವ ಕೆಲಸ ನಡೆದ್ರೆ ಮಠಾಧೀಶರಿಂದ ಪ್ರತಿಭಟನೆಗೆ ಕರೆ

ಬೆಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರಿಗೆ ಬಂದ ಸ್ಥಿತಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಬರಬಾರದು ಎಂದು ಶ್ರೀ ಗುರುಗುಂಡಾ ಬ್ರಹ್ಮೇಶ್ವರ ಸ್ವಾಮಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ.

ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ಧಾರ್ಥ್ 1,000 ಕೋಟಿ ರೂ. ಸಾಲ ತೀರಿಸಲಾಗದ ವ್ಯಕ್ತಿಯೇನಲ್ಲ. ಆದರೆ ಮಾನಸಿಕವಾಗಿ ಕುಗ್ಗಿದಾಗ ಮನುಷ್ಯ ಬಗ್ಗಿಹೋಗುತ್ತಾರೆ. ಡಿ.ಕೆ.ಶಿವಕುಮಾರ್ ಅವರು ಯಾವುದೇ ಕಾರಣಕ್ಕೂ ಮಾನಸಿಕ ಸ್ಥೈರ್ಯ ಕಳೆದುಕೊಳ್ಳಬಾರದು. ಎಲ್ಲವನ್ನೂ ಸಮರ್ಥವಾಗಿ ಎದುರಿಸಬೇಕು ಎಂದು ಸಲಹೆ ನೀಡಿದರು.

ಡಿ.ಕೆ.ಶಿವಕುಮಾರ್ ಅವರನ್ನು ತಕ್ಷಣವೇ ಬಿಡುಗಡೆ ಮಾಡಿ ಎಂದು ನಾವು ಪ್ರತಿಭಟನೆಗೆ ಇಳಿದಿಲ್ಲ. ಸಿದ್ಧಾರ್ಥ್ ಕುಟುಂಬ ಹಾಗೂ ಡಿ.ಕೆ.ಶಿವಕುಮಾರ್ ಅವರ ನೋವಿನಲ್ಲಿ ನಾವು ಇದ್ದೇವೆ ಎಂದು ತಿಳಿಸಲು ಇಲ್ಲಿ ಸೇರಿದ್ದೇವೆ. ಡಿ.ಕೆ.ಶಿವಕುಮಾರ್ ಅವರು ಹೊರ ಬಂದರೆ ಸಂತೋಷ ಪಡುವ ವ್ಯಕ್ತಿಗಳಲ್ಲಿ ನಾನು ಕೂಡ ಒಬ್ಬ. ಸಮೂದಾಯವನ್ನು ಹತ್ತಿಕ್ಕುವ ಕೆಲಸವನ್ನು ಯಾರಾದರು ಮಾಡಿದರೆ ಮಠಾಧೀಶರು ಪ್ರತಿಭಟನೆಗೆ ಕರೆ ಕೊಡಬೇಕಾಗುತ್ತದೆ ಎಂದು ಗುಡುಗಿದರು.

ನಾಡು, ನುಡಿಗಾಗಿ ಹೋರಾಟ ಮಾಡಿದ ನೀವು ಈಗ ಒಂದು ಧರ್ಮ, ವ್ಯಕ್ತಿಯ ಪರ ಹೋರಾಟ ಮಾಡುವುದು ಸರಿಯೇ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರನ್ನು ಕೇಳಿದೆ. ಆಗ ಅವರು, ಕಾವೇರಿ ಹೋರಾಟದ ವೇಳೆ ಕನ್ನಡಪರ ಹೋರಾಟಗಾರರನ್ನು ಚೆನ್ನೈನಲ್ಲಿ ಬಂಧಿಸಲಾಗಿತ್ತು. ಯಾರು ನಮ್ಮ ಬೆಂಬಲಕ್ಕೆ ನಿಲ್ಲಲಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಅವರು ಸ್ವಂತ ಹಣದಿಂದ ನಮಗೆ ಬೇಲ್ ಕೊಡಿಸಿ ಬಂಧನ ಮುಕ್ತಗೊಳಿಸಿದರು. ಅಂತಹ ನಾಯಕನನ್ನು ಬಂಧಿಸಿದಾಗ ಸುಮ್ಮನೆ ಕೂರುವುದು ಸರಿಯಲ್ಲ ಅಂತ ಪ್ರತಿಭಟನೆಗೆ ಇಳಿದಿದ್ದೇವೆ ಅಂತ ತಿಳಿಸಿದರು. ಅವರ ಮಾತು ಕೇಳಿ ನನಗೂ ಕೂಡ ಸ್ಫೂರ್ತಿ ಬಂತು ಎಂದು ಸ್ವಾಮೀಜಿ ಹೇಳಿದರು.

Leave a Reply

Your email address will not be published. Required fields are marked *