Connect with us

Bengaluru City

ಗುಂಡ್ಲುಪೇಟೆ, ನಂಜನಗೂಡಿನಲ್ಲಿ ಜಯ ಯಾರಿಗೆ? ಗುಪ್ತಚರ ಇಲಾಖೆಯ ವರದಿ ಇಲ್ಲಿದೆ

Published

on

ಬೆಂಗಳೂರು: ಪ್ರತಿಷ್ಠೆ, ಸವಾಲು, ಅನುಕಂಪದ ವಿಷಯವಾಗಿ ಭಾರೀ ಕುತೂಹಲ ಕೆರಳಿಸಿರೋ ನಂಜನಗೂಡಿನಲ್ಲಿ ಶೇ.77.56 ಹಾಗೂ ಗುಂಡ್ಲುಪೇಟೆಯಲ್ಲಿ ಶೇ.87.10 ಯಷ್ಟು ಮತದಾನವಾಗಿದೆ. ನಂಜನಗೂಡು ನಗರದಲ್ಲಿರುವ ಜೆಎಸ್‍ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ನಡೆದ್ರೆ, ಗುಂಡ್ಲುಪೇಟೆಯಲ್ಲಿರುವ ಸೆಂಟ್ ಜಾನ್ ಫ್ರೌಢಶಾಲೆಯಲ್ಲಿ ಭದ್ರತಾ ಕೊಠಡಿ ಸ್ಥಾಪಿಸಲಾಗಿದೆ. ಸ್ಟ್ರಾಂಗ್‍ರೂಮ್‍ನಲ್ಲಿ ಭದ್ರವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಗುರುವಾರ ಹೊರಬರಲಿದೆ.

ಈಗಲೇ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಹಣಾಹಣಿ ನಡೆದಿದ್ದು, ಗೆಲುವು ನಮ್ಮದೇ ಅಂತ ಎದೆಯುಬ್ಬಿಸಿ ಬೀಗುತ್ತಿವೆ. ಮತದಾನದ ನಂತರ ನಂಜನಗೂಡಿನಲ್ಲಿ ಎರಡೂ ಪಕ್ಷಗಳು ಬೂತ್ ಮಟ್ಟದಲ್ಲಿ ಡಾಟಾ ಕಲೆಕ್ಷನ್ ಮಾಡ್ತಿವೆ. ಯಾವ್ಯಾವ ಬೂತ್‍ನಲ್ಲಿ ಎಷ್ಟೆಷ್ಟು ಬೆಂಬಲಿಗರಿದ್ದಾರೆ ಅಂತ ಲೆಕ್ಕಾಚಾರದಲ್ಲಿ ತೊಡಗಿವೆ.

ನಂಜನಗೂಡಿನ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಅವ್ರು ಮೈಸೂರಿನಲ್ಲೇ ಕುಳಿತು ವಿಶ್ಲೇಷಣೆ ಮಾಡ್ತಿದ್ರೆ, ಕಾಂಗ್ರೆಸ್‍ನ ಕಳಲೇ ಕೇಶವಮೂರ್ತಿ ನಂಜನಗೂಡಿನಲ್ಲಿ ಕಾರ್ಯಕರ್ತರಿಂದ ಮಾಹಿತಿ ತರಿಸಿಕೊಳ್ತಿದ್ದಾರೆ. ಗುಂಡ್ಲುಪೇಟೆಯಲ್ಲಿ ಆಯಾ ಪಕ್ಷದ ಕಚೇರಿಯಲ್ಲಿ ಮುಖಂಡರು ಲೆಕ್ಕಾಚಾರ ನಡೆಸ್ತಿದ್ದಾರೆ.

ಈ ಬಾರಿ ಮಹಿಳೆಯರು ಹೆಚ್ಚಾಗಿ ವೋಟ್ ಮಾಡಿರೋ ಕಾರಣ ಕಾಂಗ್ರೆಸ್‍ನ ಗೀತಾಪ್ರಸಾದ್ ಉತ್ಸುಕರಾಗಿದ್ದಾರೆ. ಆದರೆ ಇಬ್ಬರು ಅಭ್ಯರ್ಥಿಗಳು ಅನುಕಂಪದ ವಿಚಾರವಾಗಿ ಚುನಾವಣೆ ಎದುರಿಸಿರುವುದರಿಂದ ಯಾರಿಗೆ ವಿಜಯಲಕ್ಷ್ಮಿ ಒಲಿಯುತ್ತಾಳೆ ಅನ್ನೋದನ್ನ ಏಪ್ರಿಲ್ 13ರವರೆಗೆ ಕಾದುನೋಡಬೇಕಿದೆ.

ಈ ಕೌತುಕ, ಆತಂಕ ಹೆಚ್ಚಾಗಿರುವ ಈ ಟೈಮಲ್ಲೇ ರಾಜ್ಯ ಮತ್ತು ಕೇಂದ್ರದ ಗುಪ್ತಚರ ಇಲಾಖೆಗಳು ಎರಡೂ ವಿಭಿನ್ನ ಮತ್ತು ವ್ಯತಿರಿಕ್ತ ವರದಿ ನೀಡಿರೋದು ಗೊತ್ತಾಗಿದೆ. ನಂಜನಗೂಡಿನಲ್ಲಿ 4 ರಿಂದ 5 ಸಾವಿರ ಮತಗಳಿಂದ ಕಾಂಗ್ರೆಸ್ ಗೆಲ್ಲಲಿದೆ ಎಂದು ರಾಜ್ಯ ಗುಪ್ತಚರ ಇಲಾಖೆ ವರದಿ ನೀಡಿದರೆ, ಸಾವಿರ ಮತಗಳಿಂದ ಬಿಜೆಪಿಗೆ ಜಯ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಗುಂಡ್ಲುಪೇಟೆ 5 ರಿಂದ 6 ಸಾವಿರ ಮತಗಳಿಂದ ಕಾಂಗ್ರೆಸ್‍ಗೆ ವಿಜಯಮಾಲೆ ಸಿಗಲಿದೆ ಎಂದು ರಾಜ್ಯ ಗುಪ್ತಚರ ಇಲಾಖೆ ವರದಿ ನೀಡಿದರೆ, 2000 ಮತಗಳಿಂದ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ವರದಿ ನೀಡಿದೆ.