Connect with us

Chikkaballapur

ದೇವಸ್ಥಾನದಲ್ಲಿನ ಹುಂಡಿ ಹೊತ್ತೊಯ್ದ ಕಳ್ಳರು- ಸಿಸಿಟಿವಿಯಲ್ಲಿ ಕೃತ್ಯ ಸೆರೆ

Published

on

– ಭೋಗ ನಂದೀಶ್ವರ ದೇವಾಲಯದಲ್ಲಿ 3ನೇ ಬಾರಿ ಕಳವು

ಚಿಕ್ಕಬಳ್ಳಾಪುರ: ವಿಶ್ವ ವಿಖ್ಯಾತ ನಂದಿ ಗಿರಿಧಾಮ ತಪ್ಪಲಿನ ಐತಿಹಾಸಿಕ ಪುರಾತನ ಪ್ರಸಿದ್ಧ ನಂದಿ ಗ್ರಾಮದ ಶ್ರೀಭೋಗ ನಂದೀಶ್ವರ ದೇಗುಲದ ಹುಂಡಿಗಳನ್ನ ಕಳ್ಳರು ಹೊತ್ತೊಯ್ದಿರುವ ಘಟನೆ ನಡೆದಿದೆ.

ದೇವಾಲಯದ ಆವರಣದಲ್ಲಿದ್ದ ಎರಡು ಹುಂಡಿಗಳನ್ನ ದೇವಸ್ಥಾನದ ಮೇಲೆ ಹೊತ್ತುಕೊಂಡು ಹೋಗಿರುವ ಇಬ್ಬರು ಕಳ್ಳರು, ಹುಂಡಿಯಲ್ಲಿದ್ದ ಹಣ ಹಾಗೂ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ.

ದೇವಸ್ಥಾನದ ಉಮಾಮಹೇಶ್ವರನ ಮುಂದೆ ಇದ್ದ ಒಂದು ಹುಂಡಿ ಹಾಗೂ ಅರುಣಾಚಲೇಶ್ವರನ ಮುಂದೆ ಇದ್ದ ಹುಂಡಿಗಳನ್ನ ಇಬ್ಬರು ಕಳ್ಳರು ಎತ್ತಿಕೊಂಡು ಹೋಗುವ ದೃಶ್ಯ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ದೇವಸ್ಥಾನದ ಮೂಲೆ ಮೂಲೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳಿವೆ. ಆದರೂ ಕಳ್ಳರು ರಾಜಾರೋಷವಾಗಿ ದೇವಸ್ಥಾನದಲ್ಲಿನ ತುಂಬಿದ ಹುಂಡಿಗಳನ್ನ ಕಳವು ಮಾಡಿದ್ದಾರೆ. ಸೂಕ್ತ ಭದ್ರತೆ ಇಲ್ಲದ್ದಕ್ಕೆ ಕಳುವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭೋಗ ನಂದೀಶ್ವರ ದೇವಸ್ಥಾನದಲ್ಲಿ ಈಗಾಗಲೇ ಮೂರು ಬಾರಿ ಕಳ್ಳತನವಾಗಿದೆ. ಒಮ್ಮೆ ದೇವಸ್ಥಾನದ ಗೋಪುರದ ಮೇಲಿದ್ದ ಕಳಸವನ್ನೇ ಕಳ್ಳರು ಕದ್ದೊಯ್ದಿದ್ದರು. ಮತ್ತೊಮ್ಮೆ, ಇದೇ ದೇವಸ್ಥಾನದಲ್ಲಿ ತುಂಬಿದ್ದ ಹುಂಡಿಯನ್ನ ಕಳ್ಳತನ ಮಾಡಿದ್ದರು. ಈಗ ಮತ್ತೊಮ್ಮೆ ಹುಂಡಿಗಳನ್ನು ಕದ್ದಿರೋದು ದೇವಸ್ಥಾನದ ಆಡಳಿತ ಮಂಡಳಿಯ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ. ಕಳ್ಳರಿಗೆ ತಕ್ಕ ಪಾಠ ಕಲಿಸಬೇಕಾದ ನಂದಿ ಗಿರಿಧಾಮ ಠಾಣೆ ಪೊಲೀಸರು ಸಹ ನಿರ್ಲಕ್ಷ್ಯ ತೋರಿದ್ದಾರೆ. ಕಳ್ಳರ ಕಾಟಕ್ಕೆ ಬ್ರೇಕ್ ಹಾಕಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಭೋಗ ನಂದೀಶ್ವರನ ದೇವಸ್ಥಾನ ದಕ್ಷಿಣ ಭಾರತದ ಐತಿಹಾಸಿಕ, ಪ್ರಸಿದ್ಧ ಪುಣ್ಯ ಸ್ಥಳ. ದಕ್ಷಿಣ ಕಾಶಿಯೆಂದೇ ಖ್ಯಾತಿ ಪಡೆದಿದೆ. ಪ್ರತಿದಿನ ನೂರಾರು ಜನ ಭಕ್ತರು ಈ ದೇವಸ್ಥಾನಕ್ಕೆ ಆಗಮಿಸಿ, ಚಿನ್ನಾಭರಣ ಸೇರಿದಂತೆ ಹಣವನ್ನು ಹುಂಡಿಗೆ ಹಾಕುತ್ತಾರೆ. ತುಂಬಿದ ಹುಂಡಿಗಳ ಮೇಲೆ ಕಣ್ಣು ಹಾಕಿರುವ ಕಳ್ಳರು, ಹುಂಡಿಗಳನ್ನ ಹೊತ್ತೊಯ್ದು, ಅದರಲ್ಲಿದ್ದ ಲಕ್ಷಾಂತರ ರೂಪಾಯಿ ಹಣ-ಚಿನ್ನಾಭರಣ ದೋಚಿದ್ದಾರೆ.

Click to comment

Leave a Reply

Your email address will not be published. Required fields are marked *