Recent News

ಸಂಪಿಗೆರಸ್ತೆ-ಯಲೇಚನಹಳ್ಳಿ ನಡುವೆ ಮೆಟ್ರೋ ರೈಲು- ರಾಷ್ಟ್ರಪತಿಗಳಿಂದ ಉದ್ಘಾಟನೆ

ಬೆಂಗಳೂರು: ಸಿಲಿಕಾನ್ ಸಿಟಿ ಜನರ 10 ವರ್ಷಗಳ ಕನಸು ನನಸಾಗಿದೆ. ಬೆಂಗಳೂರಿನ ಹೆಮ್ಮೆಯ ಪ್ರತೀಕವಾದ ನಮ್ಮ ಮೆಟ್ರೋ ಇಂದು ಅಧಿಕೃತವಾಗಿ ಉದ್ಘಾಟನೆಗೊಂಡಿತು.
ಇಂದು ದಕ್ಷಿಣ ಭಾರತದ ಮೊದಲ ಹಂತದ ನಮ್ಮ ಮೆಟ್ರೋವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಂಜೆ 6 ಗಂಟೆಗೆ ಉದ್ಘಾಟನೆ ಮಾಡಿದ್ದಾರೆ. ನಾಳೆ ಬೆಳೆಗ್ಗೆ 6 ಗಂಟೆಯಿಂದ ಸಾರ್ವಜನಿಕರ ಓಡಾಟಕ್ಕೆ ಮೊದಲ ಹಂತದ ನಮ್ಮ ಮೆಟ್ರೋ ಮಾರ್ಗ ಮುಕ್ತವಾಗಲಿದೆ.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ವಜುಬಾಯಿ ವಾಲಾ, ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು, ಕೆ.ಬಿ. ಕೋಳಿವಾಡ, ಬಿ.ಕೆ. ಶಂಕರಮೂರ್ತಿ, ಮೇಯರ ಪದ್ಮಾವತಿ, ಕೇಂದ್ರ ಸಚಿವರಾದ ಅನಂತಕುಮಾರ ಮತ್ತು ಸದಾನಂದ ಗೌಡ ಸೇರಿದಂತೆ ಅನೇಕ ಗಣ್ಯವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಸಮಯ ಬದಲಾವಣೆ: ಮಹತ್ವದ ನಿರ್ಧಾರವೊಂದರಲ್ಲಿ ಮೆಟ್ರೋ ನಿಗಮ ರೈಲುಗಳ ಓಡಾಟದ ಸಮಯದಲ್ಲಿ ಬದಲಾವಣೆ ಮಾಡಿದೆ. ಸೋಮವಾರದಿಂದ ಹೊಸ ವೇಳಾಪಟ್ಟಿ ಅನ್ವಯವಾಗಲಿದೆ. ಈಗಿರುವ 6 ಗಂಟೆಗೆ ಬದಲು ಬೆಳಗ್ಗೆ 5 ಗಂಟೆಯಿಂದ ಮೆಟ್ರೋ ರೈಲು ತನ್ನ ಸಂಚಾರ ಆರಂಭಿಸಲಿದೆ. ರಾತ್ರಿ 10 ಗಂಟೆ ಬದಲು 11 ಗಂಟೆಯವರೆಗೂ ಸಂಚಾರ ಇರಲಿದೆ. ಕೆಂಪೇಗೌಡ ರೈಲು ನಿಲ್ದಾಣದಿಂದ ನಾಲ್ಕು ಟರ್ಮಿನಲ್ ನಿಲ್ದಾಣಗಳ ಕಡೆಗೆ ರಾತ್ರಿ 11.25ಕ್ಕೆ ಕಡೆಯ ರೈಲು ಸಂಚರಿಸಲಿದೆ. ನಾಗಸಂದ್ರ ಟರ್ಮಿನಲ್‍ಗೆ ರಾತ್ರಿ 10.50ಕ್ಕೆ ಕೊನೆಯ ರೈಲು, ಯಲೇಚಲನಹಳ್ಳಿ ಟರ್ಮಿನಲ್‍ಗೆ 11 ಗಂಟೆಗೆ, ಮೈಸೂರು ರಸ್ತೆಗೆ 11.05ಕ್ಕೆ ಕೊನೆಯ ರೈಲು ಹೊರಡಲಿದೆ.

ಭಾನುವಾರ ಒಂದು ದಿನ ಮಾತ್ರ ಬೆಳಗ್ಗೆ 5.30ಕ್ಕೆ ರೈಲುಗಳ ಓಡಾಟ ಆರಂಭವಾಗಲಿದೆ. ಇನ್ನು ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಅವಧಿಯಲ್ಲಿ ಪ್ರತಿ ನಾಲ್ಕು ನಿಮಿಷಕ್ಕೊಮ್ಮೆ ರೈಲುಗಳ ಓಡಾಟ ಇರಲಿದೆ. ಕಡಿಮೆ ಇರುವ ಅವಧಿಯಲ್ಲಿ ಪ್ರತಿ 20 ನಿಮಿಷಕ್ಕೊಮ್ಮೆ ರೈಲುಗಳು ಓಡಲಿವೆ. ಸಾಮಾನ್ಯ ಅವಧಿಯಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ ಸಂಚರಿಸಲಿವೆ ಎಂದು ಬಿಎಂಆರ್‍ಸಿಎಲ್ ತಿಳಿಸಿದೆ.

ಮೆಟ್ರೋ ರೈಲಿನ ಅಧಿಕೃತ ಕೆಲಸ ಆರಂಭವಾಗಿದ್ದು ಏಪ್ರಿಲ್ 15 2007 ರಂದು. ಅಂದಿನ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಈ ಯೋಜನೆಗೆ ಚಾಲನೆ ನೀಡಿದ್ರು. ಬಿಎಂಆರ್‍ಸಿಎಲ್ ಈ ಯೋಜನೆಯನ್ನ 2005 ರಲ್ಲೆ ಆರಂಭ ಮಾಡಲು ಯೋಜನೆ ರೂಪಿಸಿಕೊಂಡಿತ್ತು. ಆದ್ರೆ ಸರ್ಕಾರದಲ್ಲಿ ಆದ ಬದಲಾವಣೆಯಿಂದ ಮೆಟ್ರೋ ಕಾಮಗಾರಿಗೆ ಒಪ್ಪಿಗೆ ದೊರೆಯಲು ನಿಧಾನವಾಯ್ತು. ಆದ್ರೆ 2006 ರಲ್ಲಿ ಕೇಂದ್ರ ಸಂಪುಟ ಸಭೆಯಲ್ಲಿ ಅಧಿಕೃತವಾಗಿ ಅನುಮೋದನೆ ಪಡೆದು ಆ ನಂತರ ಬಿಎಂಆರ್‍ಸಿಎಲ್ ತನ್ನ ಕೆಲಸ ಆರಂಭಿಸಿತು.

ನಮ್ಮ ಮೆಟ್ರೋ ಮೊದಲ ಹಂತ ಎಲ್ಲಿಂದ ಎಲ್ಲಿಗೆ ಓಡುತ್ತೆ ಎಷ್ಟು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೆಟ್ರೋ ಸಂಚಾರ ಮಾಡುತ್ತೆ ಅನ್ನೋದನ್ನ ನೊಡೋದಾದ್ರೆ
* ಬೈಯಪ್ಪನಹಳ್ಳಿ ಟು ನಾಯಂಡಹಳ್ಳಿ
* ಯಲೇಚನಹಳ್ಳಿ ಟು ನಾಗಸಂದ್ರ
* ಮೆಟ್ರೋ ಸಂಚಾರದ ಒಟ್ಟು ದೂರ: 42.3 ಕಿ.ಮೀ
* ಸುರಂಗ ಮಾರ್ಗದ ಒಟ್ಟು ದೂರ: 8.8 ಕಿ.ಮೀ
* ಎತ್ತರಿಸಿದ ಮಾರ್ಗದ ಒಟ್ಟು ದೂರ: 33.42 ಕಿ.ಮೀ
* ಒಟ್ಟು ನಿಲ್ದಾಣ: 40
* ಒಟ್ಟು ವೆಚ್ಚ: 14,291 ಕೋಟಿ ರೂಪಾಯಿ

ಒಟ್ಟು 42.3 ಕೀಲೋ ಮೀಟರ್ ದೂರ ಮೆಟ್ರೋ ಸಂಚರಿಸಲಿದೆ. ಇದ್ರಲ್ಲಿ 8.8 ಕಿಲೋ ಮೀಟರ್ ದೂರದವರೆಗೆ ಸುರಂಗ ಮಾರ್ಗವಿದ್ರೆ, 33.42 ಕಿಲೋ ಮೀಟರ್ ದೂರದವರೆಗೆ ಎತ್ತರಿಸಿದ ಮಾರ್ಗದಲ್ಲಿ ಮೆಟ್ರೋ ಸಂಚರಿಸಲಿದೆ. ಒಟ್ಟು 40 ಮೆಟ್ರೋ ನಿಲ್ದಾಣಗಳಿದ್ದು, ಈ ಎಲ್ಲಾ ಪ್ರಾಜೆಕ್ಟ್‍ಗೆ ಇದೂವರೆಗೂ ತಗುಲಿದ ಒಟ್ಟು ವೆಚ್ಚ 14,291 ಕೋಟಿ ರೂಪಾಯಿ.

ಇನ್ನು ನಮ್ಮ ಮೆಟ್ರೋನ ಪ್ರಮುಖ ಆಕರ್ಷಣೆ ಅಂದ್ರೆ ಅದು ಮೆಜೆಸ್ಟಿಕ್ ನಿಲ್ದಾಣ. ಸುಮಾರು 6 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರೋ ಈ ನಿಲ್ದಾಣದಲ್ಲಿ ಒಂದೇ ಸಮಯದಲ್ಲಿ 70 ಸಾವಿರ ಪ್ರಯಾಣಿಕರು ಬರಬಹುದು. ಸಿಟಿ ರೈಲ್ವೇ ನಿಲ್ದಾಣ, ಬಿಎಂಟಿಸಿ ನಿಲ್ದಾಣ. ಮತ್ತು ಕೆಎಸ್‍ಆರ್‍ಟಿಸಿ ನಿಲ್ದಾಣ ದಿಂದ ನೇರವಾಗಿ ಮೆಜೆಸ್ಟಿಕ್‍ನ ಈ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಕರು ಬರಬಹುದಾದಂತಹ ಸೌಲಭ್ಯವನ್ನು ಇಲ್ಲಿ ಕಲ್ಪಿಸಲಾಗಿದೆ.

ನಮ್ಮ ಮೆಟ್ರೋ ಮೊದಲ ಹಂತ ಮುಗಿಸಲು 10 ವರ್ಷಗಳ ಸುದೀರ್ಘ ಅವಧಿಯನ್ನು ತಗೆದುಕೊಂಡ ಅಧಿಕಾರಿಗಳು ಎರಡನೇ ಹಂತ ಮತ್ತು 3 ನೇ ಹಂತವನ್ನು 2022ರ ಒಳಗೆ ಮುಗಿಸುತ್ತೇವೆ ಅನ್ನೋ ಭರವಸೆ ನೀಡಿದ್ದಾರೆ.

 

 

 

Leave a Reply

Your email address will not be published. Required fields are marked *