Wednesday, 17th July 2019

ಸಾಲದ ಹಣಕ್ಕಾಗಿ ಅಪ್ರಾಪ್ತೆಯನ್ನು ಒತ್ತೆ ಇಟ್ಕೊಂಡು ವೇಶ್ಯಾವಾಟಿಕೆಗೆ ತಳ್ಳಿದ್ರು

– ಕೃತ್ಯಕ್ಕೆ ಪೇದೆಯಿಂದ ಬೆಂಬಲ

ಮೈಸೂರು: ಸಾಲ ವಾಪಸ್ ಕೊಡದಿದ್ದಕ್ಕೆ ಅಪ್ರಾಪ್ತೆಯನ್ನು ಕೀಚಕರು ಒತ್ತೆ ಇಟ್ಟುಕೊಂಡು ವೇಶ್ಯಾವಾಟಿಕೆಗೆ ತಳ್ಳಿದ ಅಮಾನವೀಯ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಗರದ ಪದ್ಮಾ ಹಾಗೂ ಪ್ರಸನ್ನ ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಆರೋಪಿಗಳು. ಇವರಿಗೆ ಮೈಸೂರಿನ ಕೆ.ಆರ್.ಸಂಚಾರಿ ಠಾಣೆಯ ಪೇದೆ ಮಹೇಶ್ ಬೆಂಬಲವಾಗಿ ನಿಂತಿದ್ದ ಎಂಬ ವಿಚಾರ ತನಿಖೆಯ ವೇಳೆ ಹೊರ ಬಿದ್ದಿದೆ.

ಆಗಿದ್ದೇನು?:
ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ಹಾಗೂ ಮಾವನ ಚಿಕಿತ್ಸೆಗಾಗಿ ಸಂತ್ರಸ್ತ ಬಾಲಕಿಯ ತಂದೆ ಪದ್ಮಾ ಬಳಿ ಸಾಲ ಪಡೆದಿದ್ದ. ಆದರೆ ಬಾಲಕಿಯ ತಂದೆ ಸಾಲವನ್ನು ಹಿಂದಿರುಗಿಸುವಲ್ಲಿ ವಿಳಂಬ ಮಾಡಿದ್ದರು. ಇದರಿಂದಾಗಿ ಪದ್ಮಾ ಬಾಲಕಿಯನ್ನು ಒತ್ತೆ ಇಟ್ಟುಕೊಂಡಿದ್ದರು. ಬಳಿಕ ಪದ್ಮಾ ತಮ್ಮ ಪ್ರಸನ್ನ ಸೇರಿ ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದರು. ಈ ಮೂಲಕ ಆರೋಪಿಗಳು ಬರೋಬ್ಬರಿ 6 ತಿಂಗಳಿಂದ ಅಪ್ರಾಪ್ತೆಯನ್ನ ಒತ್ತೆಯಾಗಿಟ್ಟುಕೊಂಡು ನೀಚ ಕೃತ್ಯ ಎಸಗಿದ್ದಾರೆ. ಇದಕ್ಕೆ ಪೇದೆ ಮಹೇಶ್ ಕೂಡ ಬೆಂಬಲ ನೀಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

6 ತಿಂಗಳ ಕಾಲ ನರಕದಲ್ಲಿದ್ದ ಅಪ್ರಾಪ್ತೆಯನ್ನು ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಪೊಲೀಸರು ರಕ್ಷಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಪದ್ಮಾ, ಪ್ರಸನ್ನ ಹಾಗೂ ಪೇದೆ ಮಹೇಶ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಅಪ್ರಾಪ್ತೆಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *