Districts
ಬಿಜೆಪಿ ಜೊತೆ ಸೇರಿದ್ರೆ 5 ವರ್ಷ ನಾನೇ ಸಿಎಂ ಆಗುತ್ತಿದ್ದೆ: ಕುಮಾರಸ್ವಾಮಿ

– ಸಿದ್ದರಾಮಯ್ಯ ನನ್ನ ಹೆಸರು ಕೆಡಿಸುವಲ್ಲಿ ಯಶಸ್ವಿಯಾದರು
ಮೈಸೂರು: ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರೆ 5 ವರ್ಷ ನಾನೇ ಮುಖ್ಯಮಂತ್ರಿಯಾಗುತ್ತಿದ್ದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ನನ್ನ ಹೆಸರು ಕೆಡಿಸುವಲ್ಲಿ ಯಶಸ್ವಿಯಾದರು. ಕಾಂಗ್ರೆಸ್ 2018ರಲ್ಲಿ ಕರ್ನಾಟಕವನ್ನು ಅಭಿವೃದ್ಧಿ ಮಾಡಲು ಮೈತ್ರಿ ಸರ್ಕಾರ ರಚನೆ ಮಾಡಲಿಲ್ಲ. ಬದಲಿಗೆ ಅವರ ಕೈಯಲ್ಲಿ ಅಧಿಕಾರವಿರಲಿ ಎಂದು ಸಮ್ಮಿಶ್ರ ಸರ್ಕಾರವನ್ನು ರಚನೆ ಮಾಡಿದರು ಎಂದು ಕೈ ಪಕ್ಷದ ಮೇಲೆ ಕಿಡಿಕಾರಿದರು. ಇದನ್ನು ಓದಿ: ಕಾಂಗ್ರೆಸ್ ಕುತಂತ್ರ, ದೇವೇಗೌಡರ ಭಾವನಾತ್ಮಕ ಮಾತಿಗೆ ಟ್ರ್ಯಾಪ್ ಆಗಿ ಕೆಟ್ಟೆ – ಎಚ್ಡಿ ಕುಮಾರಸ್ವಾಮಿ
ನಾನು ಸಂಪಾದನೆ ಮಾಡಿದ ಹೆಸರನ್ನು ಕೆಡಿಸುವ ಪ್ಲಾನ್ ನಲ್ಲಿ ಸಿದ್ದರಾಮಯ್ಯ ಯಶಸ್ವಿಯಾದರು. ನಾನು ಅವರ ಬಲೆಯಲ್ಲಿ ಟ್ರ್ಯಾಪ್ ಆಗಿ ಸಿಲುಕಿದೆ. ನಮ್ಮ ತಂದೆಯ ಎಮೋಷನಲ್ಗೆ ನಾನು ಟ್ರ್ಯಾಪ್ ಆದೆ. ದೇವೇಗೌಡರ ಒಳ್ಳೆಯತನವನ್ನು ಕಾಂಗ್ರೆಸ್ ದುರುಪಯೋಗ ಪಡಿಸಿಕೊಂಡಿತು. ನನ್ನ 12 ವರ್ಷದ ಒಳ್ಳೆಯ ಹೆಸರು ಕಾಂಗ್ರೆಸ್ ಸಹವಾಸದಿಂದ ಸರ್ವನಾಶವಾಯ್ತು ಎಂದು ಮೈತ್ರಿ ಸರ್ಕಾರದ ಬಗ್ಗೆ ಅಸಮಾಧಾನ ಹೊರ ಹಾಕಿದರು.
ಬಿಜೆಪಿ ಜೊತೆ ಸರ್ಕಾರ ಮಾಡಿದ್ದರೆ ಐದು ವರ್ಷವೂ ನಮ್ಮದೆ ಸರ್ಕಾರ ಇರುತ್ತಿತ್ತು. ನನಗೆ ಕಾಂಗ್ರೆಸ್ ಜೊತೆ ಸರ್ಕಾರ ಮಾಡಲು ಸುತಾರಂ ಇಷ್ಟ ಇರಲಿಲ್ಲ. ಆದರೂ ಮಾಡಿ ತಪ್ಪು ಮಾಡಿದೆ. ಅದರೂ ಮೈತ್ರಿ ಸರ್ಕಾರದಲ್ಲಿ ಉತ್ತಮ ಕೆಲಸ ಮಾಡಿದೆ. ಆದರೆ ನನ್ನ ಕೆಲಸಕ್ಕೆ ಪ್ರಚಾರ ಸಿಕ್ಕಲಿಲ್ಲ. ಜೊತೆಗೆ ನನ್ನ ಉತ್ತಮ ಕೆಲಸಗಳು ಜನರಿಗೆ ತಲುಪಲಿಲ್ಲ. ನಾನು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುತ್ತಿಲ್ಲ. ಆ ಪಕ್ಷದ ಮಾಜಿ ಮುಖ್ಯಮಂತ್ರಿಯ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.
