Karnataka
ಕೊರೊನಾ ವಾರಿಯರ್ಸ್ಗೆ ಗೌರವ- ಡಾ.ಮಂಜುನಾಥ್ರಿಂದ ಮೈಸೂರು ದಸರಾ ಉದ್ಘಾಟನೆ

ಮೈಸೂರು: ದಸರಾ-2020 ಉದ್ಘಾಟಕರ ಆಯ್ಕೆ ಅಂತಿಮವಾಗಿದ್ದು, ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಬಾರಿಯ ದಸರಾದಲ್ಲಿ ಕೊರೊನಾ ವಾರಿಯರ್ಸ್ಗೆ ಗೌರವ ಸಲ್ಲಿಸಲಾಗುತ್ತಿದ್ದು, ಈ ಹಿನ್ನೆಲೆ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ಅವರನ್ನು ಉದ್ಘಾಟಕರನ್ನಾಗಿ ಆಯ್ಕೆ ಮಾಡಲಾಗಿದೆ. ಕೊರೊನಾ ವಾರಿಯರ್ ಹಿನ್ನೆಲೆ ಡಾ.ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಡಾ.ಮಂಜುನಾಥ್ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ಸೋಮಶೇಖರ್ ತಿಳಿಸಿದ್ದಾರೆ.
ಅಲ್ಲದೆ ಮರಗಮ್ಮ (ಪೌರಕಾರ್ಮಿಕರು), ಡಾ.ನವೀನ್ (ಆರೋಗ್ಯ ಇಲಾಖೆ ವೈದ್ಯಾಧಿಕಾರಿ), ರುಕ್ಮಿಣಿ (ಸ್ಟಾಫ್ ನರ್ಸ್), ನೂರ್ ಜಾನ್ (ಆಶಾ ಕಾರ್ಯಕರ್ತೆ), ಕುಮಾರ್ (ಮೈಸೂರು ನಗರ ಪೊಲೀಸ್ ಪೇದೆ) ಹಾಗೂ ಅಯೂಬ್ ಅಹಮದ್ (ಸಾಮಾಜಿಕ ಕಾರ್ಯಕರ್ತ) ಇವರುಗಳಿಗೆ ಸನ್ಮಾನ ಮಾಡಲಾಗುತ್ತಿದೆ.
ಟಕ್ನಿಕಲ್ ಕಮಿಟಿ ವರದಿಯಂತೆ ದಸರಾ ಆಚರಣೆ ಮಾಡಲಾಗುವುದು. ಟೆಕ್ನಿಕಲ್ ಕಮಿಟಿ ನೀಡಿರುವ ವರದಿಯಂತೆ ದಸರಾ ಸಿದ್ಧತೆ ಮಾಡಿಕೊಳ್ಳುತ್ತೇವೆ. ಉದ್ಘಾಟನಾ ಕಾರ್ಯಕ್ರಮಕ್ಕೆ 200, ಜಂಬೂಸವಾರಿಗೆ 300 ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 50 ಮಂದಿಗೆ ಅವಕಾಶ ನೀಡಲಾಗಿದೆ. ನಾವು ಸಹ ಇಷ್ಟೇ ಜನಕ್ಕೆ ಅವಕಾಶ ಮಾಡಿಕೊಡುತ್ತೇವೆ. ಟೆಕ್ನಿಕಲ್ ಕಮಿಟಿ ಸಲಹೆ ಬಿಟ್ಟು ಪರ್ಯಾಯ ವ್ಯವಸ್ಥೆ ಮಾಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮದವರು 350 ಮಂದಿ ಇದ್ದಾರೆ. ಇದರಲ್ಲಿ 50 ಜನರಿಗೆ ಮಾತ್ರ ಅವಕಾಶ ಮಾಡಿಕೊಡುತ್ತೇವೆ. ಜನಪ್ರತಿನಿಧಿಗಳು 50 ಜನರ ಇದ್ದಾರೆ. ಈ ಸಂಖ್ಯೆಯನ್ನು ಸಹ 25ಕ್ಕೆ ಇಳಿಸುತ್ತೇವೆ. ಪೊಲೀಸರು 100 ಮಂದಿ ಇದ್ದಾರೆ ಇದನ್ನು ಸಹ ಅರ್ಧಕ್ಕೆ ಇಳಿಸುತ್ತೇವೆ. ಬೆಟ್ಟದಲ್ಲಿ ಸಹ 200 ಮಂದಿಯೊಳಗೆ ಕಾರ್ಯಕ್ರಮ ಮಾಡುತ್ತೇವೆ. ನಗರದಲ್ಲಿ ಎಲ್ಲಿಯೂ ಪಾರ್ಕಿಂಗ್ ವ್ಯವಸ್ಥೆ ಇರುವುದಿಲ್ಲ. ಜನ ಗುಂಪು ಸೇರಬಾರದು. ಎಲ್ಲಿಯೂ ಬಹಿರಂಗವಾಗಿ ಕಾರ್ಯಕ್ರಮ ನಡೆಸಬಾರದು ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಈ ಬಾರಿಯ ದಸರಾಗೆ ಒಂದು ರೂಪಾಯಿಯನ್ನು ಖರ್ಚು ಮಾಡಿಲ್ಲ. ಇನ್ನೂ ದಸರಾ ಬಜೆಟ್ ಬಗ್ಗೆ ಪ್ಲಾನಿಂಗ್ ಆಗಿಲ್ಲ. ಟೆಕ್ನಿಕಲ್ ಕಮಿಟಿ ವರದಿ ಕೊಟ್ಟಿದೆ. ಅದರ ಸೂಚನೆಯಂತೆ ಕಾರ್ಯಕ್ರಮ ರೂಪಿಸುತ್ತೇವೆ. ಕಾರ್ಯಕ್ರಮಗಳಿಗೆ ಎಷ್ಟು ಹಣ ಬೇಕು ಎಂಬುದನ್ನು ಈಗ ತೀರ್ಮಾನ ಮಾಡುತ್ತೇವೆ. ಕಳೆದ ಬಾರಿ ದಸರಾದ ಹಣ ಬಾಕಿ ಇದೆ. ಸರ್ಕಾರಕ್ಕೆ ಹಣಕಾಸು ಇಲಾಖೆಗೆ ಮನವಿ ಮಾಡಿದ್ದೇವೆ. ಶಿಘ್ರದಲ್ಲೇ ಆ ಹಣವನ್ನು ತಂದು ಬಾಕಿ ಇರುವ ಬಿಲ್ ಪಾವತಿಸುತ್ತೇವೆ ಎಂದು ತಿಳಿಸಿದ್ದಾರೆ.
