Karnataka

ಮೈಸೂರು ದಸರಾಗೆ ಡಾ.ಮಂಜುನಾಥ್ ಚಾಲನೆ- ಸಿಎಂ ಉಪಸ್ಥಿತಿ

Published

on

Share this

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಜಯದೇವ ಆಸ್ಪತ್ರೆ ನಿರ್ದೇಶಕ, ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಚಾಲನೆ ನೀಡಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ 410ನೇ ಮೈಸೂರು ದಸರಾ ಉದ್ಘಾಟನೆ ನೆರವೇರಿದೆ. ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ದಸರಾ ಉದ್ಘಾಟಿಸಿದ್ದಾರೆ. ಈ ಬಾರಿ ಕೊರೊನಾ ವಾರಿಯರ್ಸ್‍ಗೆ ಆದ್ಯತೆ ನೀಡಲಾಗಿದ್ದು, ವೈದ್ಯರಿಂದ ದಸರಾ ಉದ್ಘಾಟಿಸಲಾಗಿದೆ. ಅಲ್ಲದೆ ಕೊರೊನಾ ವಾರಿಯರ್ಸ್ ಸನ್ಮಾನ ಸಹ ಮಾಡಲಾಗುತ್ತಿದೆ. ಕೊರೊನಾ ಹಿನ್ನೆಲೆ ಅತ್ಯಂತ ಸರಳ, ಸಾಂಪ್ರದಾಯಿಕವಾಗಿ ದಸರಾ ಆಚರಿಸಲಾಗುತ್ತಿದೆ.

ಈ ಮೂಲಕ ಮೈಸೂರು ದಸರಾ 2020ಕ್ಕೆ ವೈಭವದ ಚಾಲನೆ ದೊರೆತಂತಾಗಿದ್ದು, ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ಚಾಲನೆ ನೀಡಲಾಗಿದೆ. ಉದ್ಘಾಟಕರಿಗೆ ಸಿಎಂ ಯಡಿಯೂರಪ್ಪ ಹಾಗೂ ಸಚಿವರು ಜೊತೆಯಾಗಿದ್ದಾರೆ. ಶುಭ ತುಲಾ ಲಗ್ನದಲ್ಲಿ ದಸರಾ 2020 ಉದ್ಘಾಟನೆಗೊಂಡಿದೆ. ಮೊದಲು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಯಾವುದೇ ಸ್ವಾಗತವಿಲ್ಲದೆ ನೇರವಾಗಿ ದೇವಾಲಯಕ್ಕೆ ಸಿಎಂ ತೆರಳಿದರು. ಪ್ರತಿಬಾರಿ ಪೂರ್ಣಕುಂಭ ಸ್ವಾಗತದೊಂದಿಗೆ ಸಿಎಂ ಹಾಗೂ ಉದ್ಘಾಟಕರು ದೇವಾಲಯ ಪ್ರವೇಶಿಸುತ್ತಿದ್ದರು. ಆದರೆ ಈ ಬಾರಿ ಪೂರ್ಣಕುಂಭ ಸ್ವಾಗತ ಮಾಡಲಾಗಿಲ್ಲ.

ವೇದಿಕೆಯಲ್ಲಿ ಕೊರೊನಾ ವಾರಿಯರ್ಸ್‍ಗೆ ಸನ್ಮಾನ ಸಹ ಮಾಡಲಾಗಿದ್ದು, ಮರಗಮ್ಮ (ಪೌರಕಾರ್ಮಿಕರು), ಡಾ.ನವೀನ್ (ಆರೋಗ್ಯ ಇಲಾಖೆ ಮೇಡಿಕಲ್ ಆಫಿಸರ್), ರುಕ್ಮಿಣಿ (ಸ್ಟಾಫ್ ನರ್ಸ್), ನೂರ್ ಜಾನ್ (ಆಶಾ ಕಾರ್ಯಕರ್ತೆ), ಕುಮಾರ್ (ಮೈಸೂರು ನಗರ ಪೊಲೀಸ್ ಪೇದೆ), ಅಯೂಬ್ ಅಹಮದ್ (ಸಾಮಾಜಿಕ ಕಾರ್ಯಕರ್ತ) ಇವರಿಗೆ ದಸರಾ ವೇದಿಕೆಯಲ್ಲಿ ಸನ್ಮಾನ ಮಾಡಿ ಕೊರೊನಾ ಸಂದರ್ಭದಲ್ಲಿನ ಇವರ ಸೇವೆಯನ್ನು ಸ್ಮರಿಸಲಾಗಿದೆ.

ಅರಮನೆಯಲ್ಲಿ ಖಾಸಗಿ ದರ್ಬಾರ್
ವಿಶ್ವವಿಖ್ಯಾತ ಮೈಸೂರು ದಸರಾ 2020ಕ್ಕೆ ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್‍ಗೆ ಕ್ಷಣಗಣನೆ ಆರಂಭವಾಗಿದ್ದು, ಈ ಮೂಲಕ ಅರಮನೆ ಒಳಾಂಗಣ ಪಾರಂಪರಿಕ ದಸರಾ ಕಾರ್ಯಕ್ರಮಗಳ ಆರಂಭಕ್ಕೆ ಚಾಲನೆ ದೊರೆಯಲಿದೆ. ಬೆಳಗ್ಗೆ 6.15 ರಿಂದ 6.30ರ ಶುಭ ಮಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಯಿತು. 7.45ರಿಂದ 8.15ರ ಶುಭ ಮುಹೂರ್ತದಲ್ಲಿ ಕಂಕಣಧಾರಣೆ ನೆರವೇರಿತು.

ಯದುವಂಶದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‍ಗೆ ಕಂಕಣಧಾರಣೆ ಮಾಡಲಾಯಿತು. ಬೆಳಗ್ಗೆ 10 ಗಂಟೆಗೆ ಕಳಸ ಪೂಜೆ ಸೇರಿ ಇತರ ಧಾರ್ಮಿಕ ಆಚರಣೆ ನೆರವೇರಲಿದೆ. ನಂತರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಕೊರೊನಾ ಕಾರಣಕ್ಕೆ ಖಾಸಗಿ ದರ್ಬಾರ್ ಗೆ ಮಾಧ್ಯಮದವರಿಗೂ ನಿರ್ಬಂಧ ಹೇರಲಾಗಿದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರಿಂದ ಪೂಜೆ ನೆರವೇರಿಸಲಾಗಿದೆ.

Click to comment

Leave a Reply

Your email address will not be published. Required fields are marked *

Advertisement
Advertisement