Connect with us

Districts

ಪ್ರವಾಸೋದ್ಯಮ ಇಲಾಖೆಯವರು ಬಣ್ಣದ ಕಾಗೆ ಹಾರಿಸ್ಬಾರ್ದು- ಯೋಗೇಶ್ವರ್‌ಗೆ ಪ್ರತಾಪ್ ಸಿಂಹ ಟಾಂಗ್

Published

on

– ಗ್ರಂಥಾಲಯಕ್ಕೆ ಭೇಟಿ, ಪರಿಶೀಲನೆ
– ಸಾರಿಗೆ ನೌಕರರು ಪ್ರತಿಭಟನೆ ಮಾಡಬೇಡಿ

ಮೈಸೂರು: ಪ್ರವಾಸೋದ್ಯಮ ಇಲಾಖೆಯವರು ಬಣ್ಣದ ಕಾಗೆ ಹಾರಿಸಬಾರದು ಎಂದು ಹೇಳುವ ಮೂಲಕ ಸಂಸದ ಪ್ರತಾಪ್ ಸಿಂಹ ಅವರು ಸಚಿವ ಸಿ.ಪಿ ಯೋಗೀಶ್ವರ್ ಗೆ ಟಾಂಗ್ ನೀಡಿದ್ದಾರೆ.

ಮೈಸೂರಿನಲ್ಲಿ ಹೆಲಿಟೂರಿಸಂ ಪ್ರಸ್ತಾವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಂಡ್ಯದಲ್ಲಿ ಡಿಸ್ನಿಲ್ಯಾಂಡ್, ಮೈಸೂರಿನಲ್ಲಿ ಹೆಲಿ ಟೂರಿಸಂ ಮಾಡ್ತೀವಿ ಅಂತಾರೆ. ಇಂಥವೆಲ್ಲ ನಾವೂ ತುಂಬಾ ನೋಡಿದ್ದೇವೆ. ಎರಡು ಸಲ ಪ್ರಚಾರಕ್ಕೆ ಅಂತ ಮಾತಾಡ್ತಾರೆ. ಎರಡು ವರ್ಷ ಆದ್ಮೇಲೆ ಸಚಿವರು ಬದಲಾಗುತ್ತಾರೆ. ಆ ಮೇಲೆ ಎಲ್ಲವೂ ಮರೆತು ಹೋಗುತ್ತೆ. ಹೆಲಿ ಟೂರಿಸಂ ಅನ್ನುವ ಪದ ಮಾತ್ರ ಕೇಳಿದ್ದೇವೆ. ಆ ಯೋಜನೆ ರೂಪುರೇಷೆ ಏನು..?, ನಿಮ್ಮ ಬಳಿ ವಿಷನ್ ಡಾಕ್ಯುಮೆಂಟ್ ಎಲ್ಲಿದೆ..?, ಯಾವ ಘನಕಾರ್ಯ ಮಾಡ್ತೀರಿ ಅಂತ ನಮಗೂ ಹೇಳಿ ಎಂದು ಟಾಂಗ್ ನೀಡಿದರು.

ಮೈಸೂರಿನಿಂದ ಕಾರವಾರ, ಬಳ್ಳಾರಿ, ಬೆಂಗಳೂರಿಗೆ ಹೆಲಿಕಾಪ್ಟರ್ ಸೇವೆ ಶುರು ಮಾಡುತ್ತೇವೆ ಅಂತೀರಿ. ಮೈಸೂರಿನಿಂದ ಕಾರವಾರಕ್ಕೆ ಹೋಗಿ ನೋಡುವುದು ಏನಿದೆ..? ದಸರಾ ಸಂದರ್ಭದಲ್ಲಿ ಮಾಡುವ ಹೆಲಿರೈಡ್‍ಗೇ ಜನರ ಬರೋದಿಲ್ಲ. ಯೋಜನೆ ರೂಪಿಸುವ ಮುನ್ನ ಇದೆಲ್ಲವನ್ನೂ ಗಮನಿಸಬೇಕು. ಇಷ್ಟಾಗಿಯೂ ನಿಮಗೆ ಹೆಲಿಕಾಪ್ಟರ್ ಹಾರಿಸಬೇಕು ಅನ್ನಿಸಿದರೆ ಬನ್ನಿ ವಿಮಾನ ನಿಲ್ದಾಣದಲ್ಲಿ ನಾವೇ ಜಾಗ ಕೊಡುತ್ತೇವೆ. ಕೇವಲ 10 ಮೀಟರ್ ದೂರದಲ್ಲಿ ರಾಜವಂಶಸ್ಥರಿಗೆ ಸೇರಿದ ಹೆಲಿಪ್ಯಾಡ್ ಇದೆ. ಅದನ್ನು ಬಾಡಿಗೆ, ಬೋಗ್ಯಕ್ಕೆ ಕೇಳಿದ್ರೆ ಕೊಡಲ್ಲ ಅಂತಾರಾ..?, ಹೆಲಿ ಟೂರಿಸಂಗೆ ನನ್ನ ವಿರೋಧ ಇದೆ. ಈ ಸಂಬಂಧ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಿಎಂ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತನಾಡುತ್ತೇನೆ ಎಂದರು.

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ವಿಚಾರ ಸಂಬಂಧ ಮಾತನಾಡಿ, ಮತ್ತೆ ಲಾಕ್‍ಡೌನ್ ಹೇರುವ ಪರಿಸ್ಥಿತಿ ತರಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು. ಜನರು ಕೊರೊನಾ ಬಗ್ಗೆ ಜಾಗೃತರಾಗಬೇಕು, ಮಹಾರಾಷ್ಟ್ರದ ಮುಂಬೈನಲ್ಲಾಗಿರುವ ಪರಿಸ್ಥಿತಿ ತಂದುಕೊಳ್ಳಬಾರದು. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ, ನಾನು ಕೂಡಾ ಲಸಿಕೆ ಹಾಕಿಸಿಕೊಂಡಿದ್ದೇನೆ. ಯಾವುದೇ ಒಂದು ಔಷಧಿ ಪೂರ್ಣ ಪ್ರಮಾಣದ ಸಕ್ಸಸ್ ಕೊಡುವುದಿಲ್ಲ ಎಂದು ಜನರಲ್ಲಿ ಮನವಿ ಮಾಡಿಕೊಂಡರು.

ಮೈಸೂರಿನಲ್ಲಿ ಕನ್ನಡ ಗ್ರಂಥಾಲಯ ಭಸ್ಮ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸುಟ್ಟ ಪುಸ್ತಕಗಳನ್ನು ನೋಡಿ ಬೇಸರ ವ್ಯಕ್ತಪಡಿಸಿದರು. ಅಲ್ಲದೆ ಸುಟ್ಟುಕರಕಲಾಗಿದ್ದ ಊರುಕೇರಿ ಸಿದ್ದಲಿಂಗಯ್ಯ ಅವರ ಪುಸ್ತಕ ನೋಡಿ ವಿಷಾದ ವ್ಯಕ್ತಪಡಿಸಿದರು.

ಘಟನೆ ಬಗ್ಗೆ ಸೈಯದ್ ಇಸಾಕ್ ಅವರು ಸಂಸದರಿಗೆ ವಿವರವಾಗಿ ತಿಳಿಸುತ್ತಾ ಕಣ್ಣರು ಹಾಕುತ್ತಾ ಅಳಲು ತೋಡಿಕೊಂಡರು. ಅಲ್ಲದೆ ಇದೇ ಸ್ಥಳದಲ್ಲಿ ಗ್ರಂಥಾಲಯ ಮರುನಿರ್ಮಾಣಕ್ಕೆ ಇಸಾಕ್ ಮನವಿ ಮಾಡಿಕೊಂಡರು. ಕಿಡಿಗೇಡಿಗಳನ್ನು ಬಂಧಿಸಿ ತಕ್ಕ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು. ಆಗ ಸಂಸದರು, ಗ್ರಂಥಾಲಯದ ಮರು ನಿರ್ಮಾಣದ ಭರವಸೆ ನೀಡಿ ಸ್ನೇಹಿತರು ನೀಡಿದ 50ಸಾವಿರ ಹಣವನ್ನು ಇಸಾಕ್ ಕೈಗಿತ್ತರು.

ಸಾರಿಗೆ ನೌಕರರ ಕುಟುಂಬಸ್ಥರ ಪ್ರತಿಭಟನೆ ಸಂಬಂಧ ಮಾತನಾಡಿ, ಸಾರಿಗೆ ನೌಕರರ ಹಲವು ಬೇಡಿಕೆಗಳನ್ನ ಸರ್ಕಾರ ಈಡೇರಿಸಿದೆ. 6ನೇ ವೇತನ ಆಯೋಗ ಜಾರಿಗೆ ತರಲು ಸಿಎಂ ಕಾಲಾವಕಾಶ ಕೇಳಿದ್ದಾರೆ. ನೌಕರರು ಪ್ರತಿಭಟನೆ ಮಾಡಲು ಪಕ್ಕವಾದ ಕಾಲ ಇದಲ್ಲ. ನಿಗಮದ ಬಸ್ ಗಳಿಂದ ಈಗ ಆದಾಯವೇ ಬರುತ್ತಿಲ್ಲ, ಅವರು ಸಂಬಳ ಕೇಳಲಿ ಅದು ನ್ಯಾಯಯುತವಾಗಿದೆ. ಆದರೆ ಪ್ರತಿಭಟನೆಗೆ ಜನರ ಬೆಂಬಲವೂ ಇಲ್ಲ. ಕಳೆದ ಒಂದು ವರ್ಷದಿಂದ ಅರ್ಥಿಕ ಪರಿಸ್ಥಿತಿ ಹದಗೆಟ್ಟಿದೆ, ಸದ್ಯಕ್ಕೆ ಪ್ರತಿಭಟನೆ ಬೇಡ ಎಂದು ತಿಳಿಸಿದರು.

ಪ್ರತಿಭಟನೆಗೆ ವಿರೋಧ ಪಕ್ಷಗಳ ಬೆಂಬಲ ನೀಡುತ್ತಿದ್ದಾರೆ. ಇವತ್ತು ನೌಕರರ ಬೆಂಬಲಕ್ಕೆ ನಿಂತಿರುವ ನಾಯಕರು ತಾವು ಅಧಿಕಾರದಲ್ಲಿದ್ದಾಗ ಯಾಕೆ ಸರ್ಕಾರಿ ನೌಕರರನ್ನಾಗಿ ಮಾಡಲಿಲ್ಲ. ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಿ ಅವರನ್ನ ಸರ್ಕಾರಿ ನೌಕರನ್ನಾಗಿಸಬೇಕಿತ್ತು. ಅದು ಬಿಟ್ಟು ಈಗ ಸುಖಾಸುಮ್ಮನೆ ರಾಜಕೀಯ ಮಾಡುವುದು ಸರಿಯಲ್ಲ ಎಂದು ಖಡಕ್ಕಾಗಿ ನುಡಿದರು.

Click to comment

Leave a Reply

Your email address will not be published. Required fields are marked *