Connect with us

Corona

ಮೈಸೂರಲ್ಲಿ ಮತ್ತೆ ಕೊರೊನಾ ರಣಕೇಕೆ- ಇಂದಿನಿಂದ ಪ್ರಮುಖ ಮಾರುಕಟ್ಟೆಗಳು ಬಂದ್

Published

on

ಮೈಸೂರು: ಜಿಲ್ಲೆಯಲ್ಲಿ ಮತ್ತೆ ದಿನ ದಿನಕ್ಕೂ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ದಿಢೀರನೆ ಮೈಸೂರಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿರುವುದು ಇಡೀ ಮೈಸೂರಿಗರ ನೆಮ್ಮದಿ ಕೆಡಿಸಿದೆ. ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಮೈಸೂರಿನಲ್ಲಿ ಮಾರುಕಟ್ಟೆಗಳು ಇಂದಿನಿಂದ ಬಂದ್ ಆಗುತ್ತಿವೆ. ಅಲ್ಲದೆ ಮೈಸೂರು ಮುಂದಿನ ದಿನಗಳಲ್ಲಿ ಮತ್ತಷ್ಟು ಎಚ್ಚರಿಕೆಯಿಂದ ಇರಬೇಕಾದ ಸೂಚನೆಯೂ ಜಿಲ್ಲಾಡಳಿತದಿಂದ ರವಾನೆಯಾಗಿದೆ.

ಮಹಾಮಾರಿ ಕೊರೊನಾ ಆರ್ಭಟಕ್ಕೆ ಕರುನಾಡು ತತ್ತರಿಸಿ ಹೋಗ್ತಿದೆ. ದಿನೇ ದಿನೇ ಹಿಂಡಿ ಹಿಪ್ಪೆ ಮಾಡ್ತಿರುವ ಹೆಮ್ಮಾರಿ ಕಾಟಕ್ಕೆ ಹಲವೆಡೆ ಮತ್ತೆ ಲಾಕ್‍ಡೌನ್ ಶುರುವಾಗ್ತಿದೆ. ಜ್ಯುಬಿಲಿಯಂಟ್ ಸೋಂಕು ಕಡಿಮೆಯಾದ್ಮೇಲೆ ಅರಮನೆ ನಗರಿ ಮೈಸೂರು ನೆಮ್ಮದಿಯಾಗಿತ್ತು. ಆದರೆ ಲಾಕ್ ಓಪನ್ ಆದ್ಮೇಲೆ ಇಲ್ಲೂ ಕೂಡ ಮಹಾಮಾರಿ ಮತ್ತೆ ಬಾಲ ಬಿಚ್ಚಿದೆ. ಹೀಗಾಗಿ ಮೈಸೂರಲ್ಲಿ ಇಂದಿನಿಂದ ಪ್ರಮುಖ ಮಾರುಕಟ್ಟೆಗಳು ಬಂದ್ ಆಗಲಿವೆ.

ದೇವರಾಜ ಮಾರುಕಟ್ಟೆ, ಮಾನರ್ಸ್ ಮಾರುಕಟ್ಟೆ, ಶಿವರಾಂ ಪೇಟೆ, ಬೋಟಿ ಬಜಾರ್, ಸಂತೇಪೇಟೆ ಸೇರಿ ಪ್ರಮುಖ ಮಾರುಕಟ್ಟೆ ಬಂದ್ ಆಗಲಿವೆ. ಇಂದಿನಿಂದ ಸೋಮವಾರದವರೆಗೂ ಈ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಇರುವುದಿಲ್ಲ. ಮೈಸೂರು ಮಹಾ ನಗರ ಪಾಲಿಕೆ ಈ ಆದೇಶ ಹೊರಡಿಸಿದೆ. ಮಾರುಕಟ್ಟೆಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡುವ ಉದ್ದೇಶದಿಂದ ಈ ಬಂದ್ ಮಾಡಲಾಗುತ್ತಿದೆ.

ಬೆಂಗಳೂರು ಎಫೆಕ್ಟ್ ಮೈಸೂರಿಗೂ ತಟ್ಟುತ್ತಾ..?:
ಈ ಆತಂಕವನ್ನ ಜಿಲ್ಲಾಧಿಕಾರಿಗಳೇ ವ್ಯಕ್ತಪಡಿಸಿದ್ದಾರೆ. ಮೈಸೂರಿಗೆ ಬೆಂಗಳೂರು ಹತ್ತಿರದಲ್ಲಿದೆ. ಹೀಗಾಗಿ ದಿನ ಸಾವಿರಾರು ಜನ ಓಡಾಡುತ್ತಾರೆ. ಎರಡು ಜಿಲ್ಲೆಯ ಮಧ್ಯೆ ನಿರ್ಬಂಧವಿಲ್ಲದ ಸಂಚಾರ ನಡೆಯುತ್ತಿದೆ. ಅಲ್ಲಿ ಕೊರೊನಾ ಹೆಚ್ಚಾದರೆ ಅದರ ಪರಿಣಾಮ ಇಲ್ಲೂ ಬೀರಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೊರೊನಾ ಹೀಗಾಗಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಮೈಸೂರಿಗರು ಸಿದ್ಧವಾಗಿರಬೇಕು ಅಂತ ಜಿಲ್ಲಾಧಿಕಾರಿ ಅಭಿರಾಮ್ ಎಚ್ಚರಿಸಿದ್ದಾರೆ.

ಮೈಸೂರಿನಲ್ಲಿ ಬುಧವಾರ 7 ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಅದರಲ್ಲೂ ಒಬ್ಬ ವ್ಯಕ್ತಿ ಕೊರೊನಾದಿಂದ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಮೈಸೂರಿನಲ್ಲಿ ಒಟ್ಟು 198 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ನಿನ್ನೆಯ ಏಳು ಕೇಸ್‍ಗಳಲ್ಲಿ 5 ಅಂತರರಾಜ್ಯ, 1 ಕೆಎಸ್‍ಆರ್‍ಪಿ, 1 ಪ್ರೈಮರಿ ಸಂಪರ್ಕದ ಕೇಸ್ ಇವೆ. ಈ ನಡುವೆ 10 ಮಂದಿ ಸೋಂಕಿತರು ಡಿಸ್ಚಾರ್ಜ್ ಆಗಿದ್ದು, ಒಟ್ಟು 76 ಕೇಸ್ ಆಕ್ಟಿವ್ ಕೇಸ್ ಆಗಿದೆ. ಒಟ್ಟು 122 ಮಂದಿ ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ.

ಒಟ್ಟಿನಲ್ಲಿ ಮೈಸೂರಿಗರು ಒಂದು ಚೂರು ಯಾಮಾರಿದರೂ ಕಷ್ಟಕ್ಕೆ ಸಿಲುಕುವುದು ನಿಶ್ಚಿತ. ಹೀಗಾಗಿ ಆದಷ್ಟು ಸುರಕ್ಷಿತವಾಗಿ ಬದುಕು ನಡೆಸುವುದು ಬಹು ಮುಖ್ಯ. ಇಲ್ಲದೆ ಇದ್ದರೆ ಸೋಂಕು ತಗುಲುವುದು ಕಟ್ಟಿಟ್ಟ ಬುತ್ತಿ.