Districts
ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ಧಿಗೆ 10 ಕೋಟಿ ಬಿಡುಗಡೆ ಮಾಡ್ತೀನಿ: ಸಿಎಂ

– 136 ದೇವಸ್ಥಾನಗಳಿಗೆ 136 ಕೋಟಿ ಹಣ ಬಿಡುಗಡೆ ಮಾಡಿದ್ದೇನೆ
ಮೈಸೂರು: ಮುಡುಕುತೊರೆ ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ಧಿಗೆ 10 ಕೋಟಿ ಬಿಡುಗಡೆ ಮಾಡುತ್ತೇನೆ. ಒಂದೇ ಬಾರಿಗೆ 10 ಕೋಟಿ ಬಿಡುಗಡೆ ಮಾಡುತ್ತೇನೆ. ಎರಡು ವರ್ಷದಲ್ಲಿ ಕೆಲಸ ಮುಗಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಮುಡುಕುತೊರೆ ಗ್ರಾಮದಲ್ಲಿ ಮಾತನಾಡಿದ ಅವರು, ದೇವಸ್ಥಾನ ಅಭಿವೃದ್ಧಿಗೆ ಹಣದ ಕೊರತೆ ಬರಲ್ಲ. ದೇವರೇ ಹಣ ಕೊಡ್ತಾನೆ, ದೇವಸ್ಥಾನಕ್ಕೆ ಕೊಡಲು ಯಾಕೆ ತೊಂದರೆ. 136 ದೇವಸ್ಥಾನಗಳಿಗೆ 136 ಕೋಟಿಹಣ ಬಿಡುಗಡೆ ಮಾಡಿದ್ದೇನೆ. ಒಬ್ಬ ಮನುಷ್ಯನ ಸಾಧನೆ ಬಗ್ಗೆ ಮಾತನಾಡಬೇಕು. ಮಾತೇ ಸಾಧನೆ ಆಗಬಾರದು ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.
ಮುಂದಿನ ಎರಡೂವರೆ ವರ್ಷ ನನಗೆ ಅವಕಾಶ ಇದೆ. ಇನ್ನೂ ಎರಡೂವರೆ ವರ್ಷದಲ್ಲಿ ಎಲ್ಲಾ ಕೆಲಸ ಮಾಡಿ ಮುಗಿಸುವ ಅಪೇಕ್ಷೆ ಇದೆ. ಈ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕೆಸಲ ಮಾಡುತ್ತೇನೆ. ಈ ಮೂಲಕ ಸಾಧನೆ ಮಾತನಾಡುತ್ತದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮುಂದಿನ ಎರಡೂವರೆ ವರ್ಷ ತಾವೇ ಸಿಎಂ ಅಂತ ಯಡಿಯೂರಪ್ಪ ತಿಳಿಸಿದ್ದಾರೆ.
