Connect with us

Chamarajanagar

ಮಾರಮ್ಮ ದೇವಿಯ ಪ್ರಸಾದ ಸೇವಿಸಿ 11 ಮಂದಿ ಸಾವು

Published

on

ಚಾಮರಾಜನಗರ/ಮೈಸೂರು: ಸುಳ್ವಾಡಿ ಗ್ರಾಮದ ಮಾರಮ್ಮನ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷ ಹಾಕಿದ ಘಟನೆಯಲ್ಲಿ 11 ಜನರು ಮೃತಪಟ್ಟಿದ್ದು, ಅಸ್ವಸ್ಥಗೊಂಡವರಿಗೆ ಮೈಸೂರಿನ ಕೆ.ಆರ್.ಆಸ್ಪತ್ರೆ ಹಾಗೂ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿನ ಕೆಆರ್ ಆಸ್ಪತ್ರೆ ಹಾಗೂ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಸಿದ್ಧವಿರುವಂತೆ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಸೂಚನೆ ನೀಡಿದೆ.

ಬೆಳಗ್ಗೆಯಿಂದ ಏನಾಯಿತು?:
ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಇಂದು ನಡೆದಿತ್ತು. ವಿವಿಧ ಪೂಜಾ ಕಾರ್ಯಗಳು ಮುಗಿದ ಬಳಿಕ ಮಧ್ಯಾಹ್ನ ಭಕ್ತರಿಗೆ ಪ್ರಸಾದ (ರೈಸ್‍ಬಾತ್) ವ್ಯವಸ್ಥೆ ಮಾಡಲಾಗಿತ್ತು. ಸುಳ್ವಾಡಿ ಸುತ್ತಮುತ್ತಲಿನ ಅನೇಕ ಗ್ರಾಮದ ಜನರು ದೇವಿಯ ದರ್ಶನಕ್ಕೆ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಶಂಕುಸ್ಥಾಪನೆ ಬಳಿಕ ಕೆಲವರು ಪ್ರಸಾದ ಸೇವಿಸಿ ತಮ್ಮ ಮನೆಗೆ ಹಾಗೂ ಊರುಗಳಿಗೆ ತೆರಳಿದರು.

ಊಟ ಸೇವಿಸಿದ ಸ್ವಲ್ಪ ಹೊತ್ತಿಗೆ ಮೂರ್ನಾಲ್ಕು ಮಂದಿ ದೇವಸ್ಥಾನದ ಆವರಣದಲ್ಲಿ ವಾಂತಿ ಮಾಡಿಕೊಂಡು, ನೆಲದ ಮೇಲೆ ಬಿದ್ದು ಒದ್ದಾಡಿದ್ದಾರೆ. ವೃದ್ಧರು, 20ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 80ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದರು. ಸ್ಥಳದಲ್ಲಿಯೇ ಗೋಪಿಯಮ್ಮ (40) ಹಾಗೂ ಶಾಂತ (42) ಸಾವನ್ನಪ್ಪಿದ್ದರು. ಅಸ್ವಸ್ಥಗೊಂಡಿದ್ದವರನ್ನು ತಕ್ಷಣವೇ ಕೊಳ್ಳೇಗಾಲ ಆಸ್ಪತ್ರೆಗೆ ಸಾಗಿಸಲಾಗಿತ್ತು. ಕೆಲವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದ್ದರಿಂದ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆ ಸಾಗಿಸಲಾಯಿತು.

ಕೊಳ್ಳೇಗಾಲದಿಂದ ಮೈಸೂರಿಗೆ ಸಾಗಿಸಲು ಖಾಸಗಿ ಆಸ್ಪತ್ರೆಗಳ ಆಂಬ್ಯುಲೆನ್ಸ್ ಗಳನ್ನು ಕೂಡ ಬಳಸಿಕೊಳ್ಳಲಾಯಿತು. ಸಂಜೆಯಾಗುತ್ತಿದ್ದಂತೆಯೇ ಮೃತರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಕೊಳ್ಳೇಗಾಲದಿಂದ ಮೈಸೂರಿಗೆ ಸಾಗಿಸುವಾಗ ದೇವಸ್ಥಾನದಲ್ಲಿ ಅಡುಗೆ ಮಾಡಿದ್ದ ಭಟ್ಟರ ಮಗಳು ಅನಿತಾ (12), ಪಾಪಣ್ಣ (50) ಕೊನೆಯುಸಿರೆಳೆದರು. ನಂತರ ಅಣ್ಣಯ್ಯಪ್ಪ, ಕೃಷ್ಣನಾಯ್ಕ, ರಾಚಯ್ಯ(55), ಶಿವು, ಶಕ್ತಿವೇಲು, ಅವಿನಾಶ್ ಸಾವನ್ನಪ್ಪಿದ್ದಾರೆ. ದೇವಸ್ಥಾನದ ಆವರಣದಲ್ಲಿ ಹಾಕಿದ್ದ ವಿಷಯುಕ್ತ ಆಹಾರ ಸೇವಿಸಿದ್ದ 60ಕ್ಕೂ ಹೆಚ್ಚು ಕಾಗೆಗಳು ಹಾಗೂ ಗೊರವಂಕಗಳು ವಿಲವಿಲ ಒದ್ದಾಡಿ ಪ್ರಾಣಬಿಟ್ಟವು.

ಮೃತರ ಸಂಬಂಧಿಕರು ಕೊಳ್ಳೇಗಾಲದ ಆಸ್ಪತ್ರೆ ಆವರಣ ಹಾಗೂ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ, ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಇತ್ತ ಪ್ರಸಾದ ಸೇವಿಸಿ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ದೊಡ್ಡಮಾದಯ್ಯ ಎನ್ನುವವರು ಅಲ್ಲೇ ಪ್ರಾಣಬಿಟ್ಟಿದ್ದಾರೆ.

ಕಣ್ಣು ನೀಲಿಯಾಗಿತ್ತು!:
ಎಲ್ಲರ ಕಣ್ಣು ನೀಲಿಗೆ ತಿರುಗಿದೆ. ಎಲ್ಲರನ್ನೂ ಗಮನಿಸಿದಾಗ ಉಸಿರಾಟದ ತೊಂದರೆ ಕಾಣಿಸಿದೆ. ಪ್ರಸಾದದಲ್ಲಿ ಕ್ರಿಮಿನಾಶಕ ಅಥವಾ ಟಿಕ್-20 ಬೆರೆಸಿರುವ ಸಾಧ್ಯತೆ ಇದೆ ಎಂದು ಮೈಸೂರು ಜಿಲ್ಲಾಸ್ಪತ್ರೆ ಡಿ.ಎಚ್.ಒ ಡಾ.ಬಸವರಾಜ್ ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ಸುಳ್ವಾಡಿ ಗ್ರಾಮದ ಚಿನ್ನಪ್ಪಿ ಹಾಗೂ ಮಾದೇಶ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರೋದಾಗಿ ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ಹೇಳಿದ್ದಾರೆ.

ಘಟನೆಯ ತಿಳಿದ ತಕ್ಷಣ ಸಿಎಂ ಕುಮಾರಸ್ವಾಮಿ ಅವರು ಮೈಸೂರಿಗೆ ಭೇಟಿ ನೀಡಿ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದರು. ಇದಕ್ಕೂ ಮುನ್ನ ಚೆನ್ನೈನಲ್ಲಿ ಮಾತನಾಡಿದ ಅವರು, ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿವವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ನೀಡುತ್ತದೆ ಎಂದು ಭರವಸೆ ನೀಡಿದರು. ಈ ಘಟನೆ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವೆ ಎಂದು ತಿಳಿಸಿದರು.

https://www.youtube.com/watch?v=V_qoMhCwGNs

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv