Wednesday, 15th August 2018

Recent News

ಆದಾಯದಲ್ಲಿ ಏರಿಕೆ ಕಂಡ ಮೈಸೂರು ಮೃಗಾಲಯ

ಮೈಸೂರು: ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವುದರ ಜೊತೆ ಮೈಸೂರು ಮೃಗಾಲಯದ ಆದಾಯ ಕಳೆದ ಹಣಕಾಸು ವರ್ಷದಲ್ಲಿ ಏರಿಕೆ ಕಂಡಿದೆ.

ಮೈಸೂರು ಮೃಗಾಲಯದ ಪ್ರವೇಶದ್ವಾರ ಶುಲ್ಕವನ್ನು ಈ ಬಾರಿ ಏರಿಸಲಾಗಿದೆ. ಅಷ್ಟೇ ಅಲ್ಲದೇ ಪ್ರಾಣಿ ದತ್ತು ಯೋಜನೆಯಲ್ಲಿ ಭಾರೀ ಏರಿಕೆ ಕಂಡಿದೆ. ಎಲ್ಲದರ ಪರಿಣಾಮ ಮೃಗಾಲಯದ ಆದಾಯದಲ್ಲಿ ಏರಿಕೆ ಕಂಡಿದೆ.

2016-17 ಸಾಲಿನ ಹಣಕಾಸು ವರ್ಷದಲ್ಲಿ ಮೃಗಾಲಯ 19 ಕೋಟಿ ರೂ. ಆದಾಯ ಗಳಿಸಿತ್ತು. 2017-18 ಸಾಲಿನ ಹಣಕಾಸು ವರ್ಷದಲ್ಲಿ 23.10 ಕೋಟಿ ರೂ. ಆದಾಯ ಗಳಿಸಿದೆ. ಒಂದೇ ವರ್ಷದಲ್ಲಿ ಒಟ್ಟು 3 ಕೋಟಿ ರೂ. ಆದಾಯದಲ್ಲಿ ಏರಿಕೆ ಕಂಡಿದೆ.

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ 1 ಲಕ್ಷದ 30 ಸಾವಿರ ಮಂದಿ ಮೃಗಾಲಯಕ್ಕೆ ಭೇಟಿ ನೀಡಿದ್ದರೆ ಈ ವರ್ಷ ಮಾರ್ಚ್ ತಿಂಗಳಲ್ಲಿ 1 ಲಕ್ಷದ 60 ಸಾವಿರ ಮಂದಿ ಭೇಟಿ ನೀಡಿದ್ದಾರೆ. ಮೇ ತಿಂಗಳ ಪ್ರವಾಸಿಗರ ಸಂಖ್ಯೆಯಲ್ಲೂ ಕಳೆದ ವರ್ಷಕ್ಕಿಂತ 60 ಸಾವಿರ ಹೆಚ್ಚಳವಾಗಿದೆ. 2017-18 ಸಾಲಿನಲ್ಲಿ 35 ಲಕ್ಷ ಮಂದಿ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ.

ಮೃಗಾಲಯಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಸಿಗದ ಕಾರಣ 17 ವರ್ಷಗಳಲ್ಲಿ 4,041 ಪ್ರಾಣಿಗಳನ್ನು 3,149 ವ್ಯಕ್ತಿಗಳು ದತ್ತು ಸ್ವೀಕರಿಸಿದ್ದಾರೆ. 17 ವರ್ಷಗಳ ಹಿಂದೆ ಆರ್ಥಿಕ ನಷ್ಟದಿಂದಾಗಿ ಮೈಸೂರು ಮೃಗಾಲಯ ಮುಚ್ಚುವ ಹಂತ ತಲುಪಿತ್ತು. ಹೀಗಾಗಿ, ಅಂದಿನ ಕಾರ್ಯನಿರ್ವಾಹಕ ನಿರ್ದೇಶಕ ಕುಮಾರ ಪುಷ್ಕರ್ ಅವರು ಪ್ರಾಣಿಗಳ ದತ್ತು ಯೋಜನೆ ಆರಂಭಿಸಿದ್ದರು. ಈ ಯೋಜನೆ ಅಸ್ತಿತ್ವಕ್ಕೆ ಬಂದ 2001-02ನೇ ಸಾಲಿನಲ್ಲಿ 40 ಸಾವಿರ ಲಭಿಸಿತ್ತು. ಅಲ್ಲಿಂದ ದತ್ತು ಪಡೆಯುವವರ ಸಂಖ್ಯೆ ಹಾಗೂ ಆದಾಯ ಹೆಚ್ಚಾಗುತ್ತಿದೆ. ಒಂದು ಹುಲಿ ನಿರ್ವಹಣೆಗೆ ವರ್ಷಕ್ಕೆ 4 ಲಕ್ಷ ರೂ. ಖರ್ಚಾಗುತ್ತದೆ.

Leave a Reply

Your email address will not be published. Required fields are marked *