Connect with us

Crime

‘ರಾಮ್ ರಾಮ್’ ಎಂದು ಹೇಳದ್ದಕ್ಕೆ ಮುಸ್ಲಿಂ ದಂಪತಿಗೆ ಥಳಿತ

Published

on

ಜೈಪುರ: ರಾಮ್, ರಾಮ್ ಎಂದು ಹೇಳದ್ದಕ್ಕೆ ಮುಸ್ಲಿಂ ದಂಪತಿಗೆ ಇಬ್ಬರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ಆರೋಪಿಗಳನ್ನು ನನ್ಶ್ ಭಾರಧ್ವಾಜ್ ಹಾಗೂ ಸುರೇಂದ್ರ ಭಾಟಿಯಾ ಎಂದು ಗುರುತಿಸಲಾಗಿದೆ. ಹರಿಯಾಣಕ್ಕೆ ತೆರಳುತ್ತಿದ್ದ ದಂಪತಿ ಅಲ್ವರ್ ಬಸ್ ನಿಲ್ದಾಣದಲ್ಲಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಆರೋಪಿಗಳಿಬ್ಬರು ದಂಪತಿ ವಿರುದ್ಧ ನಿಷ್ಠುರವಾಗಿ ನಡೆದುಕೊಂಡಿದ್ದಾರೆ. ಇದರಿಂದ ಗಾಬರಿಗೊಂಡ ಜೋಡಿ ಸಹಾಯ ಮಾಡುವಂತೆ ಜೋರಾಗಿ ಕಿರುಚಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಆರೋಪಿಗಳಿಗೆ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ದಂಪತಿ ಆರೋಪಿಗಳ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆಗಿದ್ದೇನು?
ವರದಿಗಳ ಪ್ರಕಾರ, ಪತ್ನಿಯು ತವರು ಮನೆ ಡಿಡ್ವಾನಾದಿಂದ ಹರಿಯಾಣದ ನುಹ್ ನತ್ತ ಪ್ರಯಾಣ ಬೆಳೆಸಿದ್ದರು. ಹೀಗಾಗಿ ಪತ್ನಿಯನ್ನು ಕರೆದೊಯ್ಯಲೆಂದು ಪತಿ ಅಲ್ವಾರ್ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ ದಂಪತಿ ಹಾಗೂ ಅವರ ಮಕ್ಕಳು ಸ್ನ್ಯಾಕ್ಸ್ ತಿನ್ನುತ್ತಾ ಬಸ್ ನಿಲ್ದಾಣದಲ್ಲಿ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಬಂದ ಇಬ್ಬರು ದಂಪತಿಯೊಂದಿಗೆ ಅಸಭ್ಯವಾಗಿ ನಡೆದುಕೊಳ್ಳಲು ಪ್ರಾರಂಭಿಸಿದ್ದಾರೆ.

‘ಮುಸ್ಲಿಮರಿಗೆ ಜೀವನ ಮಾಡಲು ಹಿಂದುಸ್ತಾನ್ ಬೇಕು. ಆದರೆ ರಾಮ್ ರಾಮ್ ಎಂದು ಹೇಳಲು ಆಗುತ್ತಿಲ್ಲ’ ಎಂದು ಹೇಳುತ್ತಾ ಇಬ್ಬರೂ ಕಿರುಕುಳ ನೀಡಿದ್ದಾರೆ. ಅಲ್ಲದೆ ರಾಮ್-ರಾಮ್ ಹೇಳುವಂತೆ ದಂಪತಿಯನ್ನು ಒತ್ತಾಯಿಸಿದ್ದಾರೆ. ಇದನ್ನು ದಂಪತಿ ನಿರಾಕರಿಸಿದ್ದಾರೆ. ಇದರಿಂದ ಸಿಟ್ಟುಗೊಂಡ ಆರೋಪಿಗಳಿಬ್ಬರೂ ದಂಪತಿಯನ್ನು ಥಳಿಸಿದ್ದಾರೆ.

ಇತ್ತ ಪತಿಗೆ ಹೊಡೆಯುತ್ತಿರುವುದನ್ನು ತಡೆಯಲು ಹೋದ ಪತ್ನಿಯ ಮೇಲೂ ಆರೋಪಿಗಳು ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಅಲ್ಲದೆ ಮಹಿಳೆಯ ಎದುರೇ ಬಟ್ಟೆ ಬಿಚ್ಚಿ ಅಶ್ಲೀಲವಾಗಿ ವರ್ತಿಸಿದ್ದಾರೆ. ಇಷ್ಟೆಲ್ಲಾ ಆಗುತ್ತಿದ್ದನ್ನು ಗಮನಿಸಿದ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದು, ಆರೋಪಿಗಳಿಬ್ಬರಿಗೆ ಚೆನ್ನಾಗಿ ಥಳಿಸಿದ್ದಾರೆ. ನಂತರ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಥಳಿತಕ್ಕೊಳಗಾದ ಆರೋಪಿಗಳನ್ನು ಅಲ್ವಾರ್ ನಲ್ಲಿರುವ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 354ಎ(ವಿವಸ್ತ್ರಗೊಳಿಸಲು ಯತ್ನ), 295ಎ(ಧಾರ್ಮಿಕ ಭಾವನೆಗಳಿಗೆ ಪ್ರಚೋದನೆ), 509(ಮಹಿಳೆಯ ಮಾನಹರಣಕ್ಕೆ ಯತ್ನ) ಹಾಗೂ 323(ಹಲ್ಲೆ)ಗಳ ಅಡಿಯಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.