Latest
ನಗರ ಸಭೆಯವರು ಕಸ ಮನೆ ಮುಂದೆ ಸುರಿದಿದ್ದಕ್ಕೆ ಆಘಾತಗೊಂಡು ಮಹಿಳೆ ಸಾವು

ಹೈದರಾಬಾದ್: ನಗರಸಭೆಯವರು ಮನೆ ಮುಂದೆ ಕಸ ಹಾಕಿದ್ದಕ್ಕೆ ಆಘಾತಕ್ಕೊಳಗಾಗಿ ಮಹಿಳೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಾರಾಯಣಖೇಡ್ ಜಿಲ್ಲೆಯಲ್ಲಿ ನಡೆದಿದೆ.
ನಾರಾಯಣ್ಖೇಡ್ ನಗರಸಭೆಯ ಅಧಿಕಾರಿಗಳು ಭೂಮವ್ವ ಅವರ ಮನೆಯ ಮುಂದೆ ಡಿ.15ರಂದು ಕಸ ತಂದು ಸುರಿದಿದ್ದರು. ಮನೆಯ ತೆರಿಗೆ ಪಾವತಿಸದ್ದಕ್ಕೆ ಅಧಿಕಾರಿಗಳು ಈ ರೀತಿ ದುರ್ವರ್ತನೆ ತೋರಿದ್ದರು. ಇದರಿಂದ ಆಘಾತಕ್ಕೊಳಗಾದ ಮಹಿಳೆ ಸಾವನ್ನಪ್ಪಿದ್ದಾಳೆ.
ನಗರಸಭೆಯವರು ಮನೆಯ ಮುಂದೆ ಕಸ ಹಾಕಿದ್ದರಿಂದ ಭೂಮವ್ವ ಅವರು ತೀವ್ರ ಅಸಮಾಧಾನಗೊಂಡಿದ್ದರು. ಅಲ್ಲದೆ ಅವಮಾನವಾಗಿದ್ದರಿಂದ ತೀವ್ರ ಆಘಾತ ಉಂಟಾಗಿ ಮಹಿಳೆ ಸಾವನ್ನಪ್ಪಿದ್ದಾಳೆ. ಶನಿವಾರ ಮಹಿಳೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಬಳಿಕ ಕುಟುಂಬಸ್ಥರು ಸಂಗಾರೆಡ್ಡಿಯಲ್ಲಿನ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಇಂದು ಸಾವನ್ನಪ್ಪಿದ್ದಾಳೆ.
ಕುಟುಂಬಸ್ಥರು ನಗರ ಸಭೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳ ವಿಪರೀತ ಕ್ರಮದಿಂದಾಗಿ ಭುಮವ್ವ ಅವರಿಗೆ ಅವಮಾನವಾಗಿ ಅಸ್ವಸ್ಥರಾಗಿದ್ದರು. ಬಳಿಕ ಸಾವನ್ನಪ್ಪಿದ್ದಾರೆ ಎಂದು ದೂರಿದ್ದಾರೆ.
ನಗರಸಭೆ ಅಧಿಕಾರಿಗಳು ಡಿಸೆಂಬರ್ 15ರಂದು ಭುಮವ್ವ ಅವರ ಮನೆಯ ಮುಂದೆ ಕಸ ಸುರಿದಿದ್ದರು. ಬಳಿಕ ಡಿಸೆಂಬರ್ 17ರಂದು ಕಸವನ್ನು ತೆರವುಗೊಳಿಸಿದ್ದರು. ಇದರಿಂದ ಆಘಾತಕ್ಕೊಳಗಾಗಿ ಭೂಮವ್ವ ಆರೋಗ್ಯದಲ್ಲಿ ಏರುಪೇರಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ಕುರಿತು ಕುಟುಂಬಸ್ಥರಿಂದ ದೂರು ಸ್ವೀಕರಿಸಲಾಗಿದ್ದು, ಮಹಿಳೆ ಅಸ್ತಮಾದಿಂದ ಬಳಲುತ್ತಿದ್ದಳು. ಅಲ್ಲದೆ ವಿವಿಧ ಖಾಯಿಲೆ ಹೊಂದಿದ್ದರು ಎಂದು ಅಧಿಕಾರಿಗಳು ವಾದಿಸಿದ್ದಾರೆ.
