Connect with us

Crime

ಮದುವೆಯಾಗಲು ನಿರಾಕರಿಸಿದ್ದಕ್ಕೆ ಮಹಿಳೆಯನ್ನು ಚಲಿಸುತ್ತಿದ್ದ ರೈಲಿನ ಮುಂದೆ ತಳ್ಳಿದ!

Published

on

– ಮಹಿಳೆಯ ತಲೆಗೆ 12 ಹೊಲಿಗೆ

ಮುಂಬೈ: ಮದುವೆಯಾಗಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳೆಯನ್ನು ಚಲಿಸುತ್ತಿರುವ ರೈಲಿನ ಮುಂದೆ ದೂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಆಕೆಯ ತಲೆಗೆ ಪೆಟ್ಟಾಗಿದ್ದು, 12 ಹೋಲಿಗೆಗಳನ್ನು ಹಾಕಲಾಗಿದೆ.

ಆರೋಪಿಯನ್ನು ಸುಮೇಧ್ ಜಾಧವ್ ಎಂದು ಗುರುತಿಸಲಾಗಿದ್ದು, ಈತ ವಡಾಲಾ ನಿವಾಸಿ. ಮಹಿಳೆಯನ್ನು ರೈಲಿನ ಬಳಿಗೆ ದೂಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಘಟನೆ ಶುಕ್ರವಾರ ಸಂಜೆ ಮುಂಬೈನ ಖಾರ್ ರೈಲ್ವೆ ಸ್ಟೇಷನ್‍ನಲ್ಲಿ ಸಂಭವಿಸಿದ್ದು, ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಪೊಲೀಸರು ತಾಂತ್ರಿಕತೆ ಹಾಗೂ ಬುದ್ಧಿವಂತಿಕೆಯ ಮೂಲಕ ಆರೋಪಿಯನ್ನು 12 ಗಂಟೆಗಳ ಒಳಗೆ ಬಂಧಿಸಿದ್ದಾರೆ.

ಘಟನೆ ವಿಚಾರವಾಗಿ ಮಾತನಾಡಿದ ಇನ್ಸ್ ಪೆಕ್ಟರ್ ವಿಜಯ್ ಚೌಗುಲೆ, ಮಹಿಳೆ ಹಾಗೂ ಆರೋಪಿ ಇಬ್ಬರು ಎರಡು ವರ್ಷಗಳ ಹಿಂದೆ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹಾಗಾಗಿ ಪರಸ್ಪರ ಒಬ್ಬರಿಗೊಬ್ಬರು ತಿಳಿದುಕೊಂಡಿದ್ದರು. ನಂತರ ಅವರ ಪರಿಚಯ ಸ್ನೇಹವಾಗಿ ಬದಲಾಯಿತು. ಆದರೆ ಆರೋಪಿ ಕುಡಿತದ ದಾಸ ಎಂದು ತಿಳಿದ ಮಹಿಳೆ, ಆತನಿಂದ ದೂರವಾಗಿದ್ದಾಳೆ. ಆದರೂ ಮಹಿಳೆಗೆ ಆರೋಪಿ ಕಿರುಕುಳ ನೀಡುತ್ತಿದ್ದನು. ಹಾಗಾಗಿ ಮಹಿಳೆ ಆರೋಪಿ ವಿರುದ್ಧ ಕೆಲವು ದೂರುಗಳನ್ನು ಕೂಡ ನೀಡಿದ್ದಳು. ಆದರೆ ಆರೋಪಿ ಆಕೆಯನ್ನು ಹಿಂಬಾಲಿಸುತ್ತಲೇ ಇದ್ದನು ಎಂದು ಹೇಳಿದರು.

ಶುಕ್ರವಾರ ಸಂಜೆ ಮಹಿಳೆ ಮುಂಬೈನ ಅಂದೇರಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾಳೆ. ಅಲ್ಲದೆ ಆಕೆಯ ಸಹಾಯಕ್ಕಾಗಿ ಮಹಿಳೆ ತನ್ನ ಅಮ್ಮನನ್ನು ರೈಲ್ವೆ ನಿಲ್ದಾಣಕ್ಕೆ ಬರುವಂತೆ ತಿಳಿಸಿದ್ದಳು. ಮಹಿಳೆ ನಿಲ್ದಾಣಕ್ಕೆ ಬಂದು ಆಕೆಯ ತಾಯಿಯನ್ನು ಭೇಟಿ ಮಾಡಿದಾಗಲೂ ಆರೋಪಿ ಸುಮೇದ್ ಮಹಿಳೆಯನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ ಹಾಗೂ ಆಕೆಯನ್ನು ಅಡ್ಡಗಟ್ಟಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾನೆ. ಆದರೆ ಮಹಿಳೆ ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಇದರಿಂದ ಆರೋಪಿ ತಾನು ಸಾಯುವುದಾಗಿ ಮಹಿಳೆಗೆ ಬೆದರಿಕೆಯೊಡ್ಡಿ ನಿಲ್ದಾಣಕ್ಕೆ ಬರುತ್ತಿದ್ದ ರೈಲಿನ ಕಡೆಗೆ ಓಡಲು ಆರಂಭಿಸಿದ್ದಾನೆ. ಬಳಿಕ ಓಡುವುದನ್ನು ನಿಲ್ಲಿಸಿ ಹಿಂದಿರುಗಿ ಮಹಿಳೆಯನ್ನು ಚಲಿಸುತ್ತಿದ್ದ ರೈಲು ಮತ್ತು ಫ್ಲಾಟ್‍ಫಾರ್ಮ್ ನಡುವಿನ ಅಂತರದಲ್ಲಿ ದೂಡಿದ್ದಾನೆ. ಈ ವೇಳೆ ಮಗಳನ್ನು ಉಳಿಸಲು ಆಕೆಯ ತಾಯಿ ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೂ ಮಹಿಳೆಯನ್ನು ಆರೋಪಿ ರೈಲಿನ ಬಳಿ ದೂಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆಯಲ್ಲಿ ಮಹಿಳೆ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು, ಇದೀಗ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಹಾಗೂ ಆಕೆಯ ತಲೆಗೆ 12 ಹೋಲಿಗೆಯನ್ನು ಹಾಕಿಸಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ವಿಜಯ್ ಚೌಗುಲೆ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *