Connect with us

Corona

ಲಾಕ್‍ಡೌನ್ ಇದ್ದರೂ ಮನೆಯಿಂದ ಹೊರಹೋದ ತಮ್ಮ – ಚುಚ್ಚಿಚುಚ್ಚಿ ಕೊಂದ ಅಣ್ಣ

Published

on

– ದಿನಸಿ ತರಲು ಹೋಗಿದ್ದೆ ತಪ್ಪಾಯ್ತು
– ತಮ್ಮನ ಪತ್ನಿಗೂ ಕಪಾಳಮೋಕ್ಷ

ಮುಂಬೈ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಆದರೆ ಕೆಲವರು ನಿಯಮ ಪಾಲಿಸದೆ ಸೋಂಕು ಹರಡುವಿಕೆಗೆ ಕಾರಣರಾಗುತ್ತಿದ್ದಾರೆ. ಹೀಗೆ ಮುಂಬೈನಲ್ಲಿ ಲಾಕ್‍ಡೌನ್ ಇದ್ದರೂ ಮನೆಯಿಂದ ತಮ್ಮ ಹೋರಹೋದ ಎಂದು ರೊಚ್ಚಿಗೆದ್ದ ಅಣ್ಣ ಆತನನ್ನು ಚಾಕು ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.

ಮುಂಬೈನ ಕಾಂದಿವಲಿ(ಪೂರ್ವ) ನಿವಾಸಿ ದುರ್ಗೇಶ್ ಥಾಕೂರ್ ತನ್ನ ತಮ್ಮ ರಾಜೇಶ್(21) ಅನ್ನು ಕೊಲೆ ಮಾಡಿದ್ದಾನೆ. ಮನೆಯಲ್ಲಿ ದಿನಸಿ ಸಾಮಾಗ್ರಿ ಖಾಲಿಯಾಗಿದಕ್ಕೆ ರಾಜೇಶ್ ತನ್ನ ಪತ್ನಿ ಜೊತೆ ದಿನಸಿ ಅಂಗಡಿಗೆ ಹೊರಟಿದ್ದನು. ಈ ವೇಳೆ ಆತನನ್ನು ದುರ್ಗೇಶ್ ತಡೆದು, ಹೊರಗೆ ಹೋಗಬೇಡ ಸುಮ್ಮನೆ ರಿಸ್ಕ್ ಯಾಕೆ? ಮನೆಯಲ್ಲಿಯೇ ಇರು. ಹೊರಗಡೆ ಹೋದರೆ ಕೊರೊನಾ ವೈರಸ್ ತಗಲುವ ಸಾಧ್ಯತೆ ಇದೆ ಎಂದು ತಡೆದಿದ್ದನು.

ಮನೆಯಲ್ಲಿ ದಿನಸಿ ಇರದ ಕಾರಣ ದುರ್ಗೇಶ್ ಕಣ್ಣು ತಪ್ಪಿಸಿ ರಾಜೇಶ್ ಹಾಗೂ ಆತನ ಪತ್ನಿ ಅಂಗಡಿಗೆ ಹೋಗಿದ್ದರು. ಆದರೆ ಸಾಮಾಗ್ರಿ ಖರೀದಿ ಮಾಡಿಕೊಂಡು ಇಬ್ಬರು ಮನೆಗೆ ವಾಪಸ್ ಬಂದಾಗ ದುರ್ಗೇಶ್ ಇಬ್ಬರ ಮೇಲೆ ರೇಗಾಡಿದ್ದಾನೆ. ಇದರಿಂದ ಅಣ್ಣ, ತಮ್ಮನ ನಡುವೆ ಜಗಳ ನಡೆದಿದ್ದು, ಮಾತಿಗೆ ಮಾತು ಬೆಳೆದು ಸಹೋದರರ ಕಿತ್ತಾಟ ತಾರಕ್ಕಕ್ಕೇರಿದೆ. ಸಿಟ್ಟಿಗೆದ್ದ ಅಣ್ಣ ತಮ್ಮನ ಪತ್ನಿ ಕೆನ್ನೆಗೆ ಹೊಡೆದು, ತಮ್ಮನ ಹೊಟ್ಟೆಗೆ ಚಾಕು ಇರಿದಿದ್ದಾನೆ.

ತಕ್ಷಣ ರಾಜೇಶ್‍ನನ್ನು ಆಸ್ಪತ್ರಗೆ ಕರೆದುಕೊಂಡು ಹೋದರೂ ಏನೂ ಪ್ರಯೋಜನವಾಗಲಿಲ್ಲ, ಆಸ್ಪತ್ರೆಗೆ ಮುಟ್ಟುವ ಮೊದಲೇ ಆತ ಮೃತಪಟ್ಟಿದ್ದನು. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.