Connect with us

Cricket

ರೋಹಿತ್ ಭರ್ಜರಿ ಆಟಕ್ಕೆ ಐದನೇ ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ ಮುಂಬೈ

Published

on

Share this

– ಡೆಲ್ಲಿ ಚೊಚ್ಚಲ ಐಪಿಎಲ್ ಆಸೆ ಭಗ್ನ, ದಾಖಲೆ ಬರೆದ ರೋಹಿತ್

ದುಬೈ: ಇಂದು ನಡೆದ ಐಪಿಎಲ್-2020ಯ ಫೈನಲ್ ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದ ಮುಂಬೈ ತಂಡ ಗೆದ್ದು ಬೀಗಿದೆ. ಈ ಮೂಲಕ ಐದನೇ ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿದೆ.

ಇಂದಿನ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡಿತ್ತು. ನಂತರ ನಾಯಕ ಶ್ರೇಯಸ್ ಐಯ್ಯರ್ ಮತ್ತು ರಿಷಭ್ ಪಂತ್ ಅವರ ತಾಳ್ಮೆಯ ಆಟದಿಂದ ನಿಗದಿತ 20 ಓವರಿನಲ್ಲಿ 156 ರನ್ ಸಿಡಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ನಾಯಕ ರೋಹಿತ್ ಶರ್ಮಾ ಅವರು ಸ್ಫೋಟಕ ಬ್ಯಾಟಿಂಗ್‍ನಿಂದ ಇನ್ನೂ 8 ಬಾಲ್ ಬಾಕಿಯಿದ್ದಂತೆ ಮುಂಬೈ 157 ರನ್ ಬಾರಿಸಿ ಟ್ರೋಫಿ ಗೆದ್ದುಕೊಂಡಿತು.

ದಾಖಲೆ ಬರೆದ ಮುಂಬೈ
ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‍ನಲ್ಲಿ ಐದು ಬಾರೀ ಚಾಂಪಿಯನ್ ಆಗಿ ದಾಖಲೆ ಬರೆದಿದೆ. ಮುಂಬೈ 2013, 2015, 2017 ಮತ್ತು 2019ರಲ್ಲಿ ಕಪ್ ಗೆದ್ದು ಅತೀ ಹೆಚ್ಚು ಬಾರೀ ಐಪಿಎಲ್ ಟ್ರೋಫಿ ಗೆದ್ದ ತಂಡವಾಗಿತ್ತು. ಈಗ ಈ ಬಾರಿಯು ಕಪ್ ಗೆದ್ದು, ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದ ಏಕೈಕ ತಂಡ ಎಂಬ ದಾಖಲೆ ಬರೆದಿದೆ. ಜೊತೆಗೆ ನಾಯಕನಾಗಿ ರೋಹಿತ್ ಅವರು ಕೂಡ ಐದು ಬಾರೀ ಐಪಿಎಲ್ ಟ್ರೋಫಿ ಗೆದ್ದ ಕ್ಯಾಪ್ಟನ್ ಎಂಬ ಖ್ಯಾತಿ ಪಡೆದಿದ್ದಾರೆ.

ಡೆಲ್ಲಿ ನೀಡಿದ 157 ರನ್ ಗುರಿಯನ್ನು ಬೆನ್ನಟ್ಟಲು ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ತಂಡ ಡಿಸೆಂಟ್ ಓಪನಿಂಗ್ ಪಡೆದುಕೊಂಡಿತು. ಆದರೆ ತಂಡದ ಮೊತ್ತ 45 ರನ್ ಆಗಿದ್ದಾಗ ಕ್ವಿಂಟನ್ ಡಿ ಕಾಕ್ ಅವರು ಮಾರ್ಕಸ್ ಸ್ಟೋಯಿನಿಸ್ ಅವರ ಬೌಲಿಂಗ್‍ನಲ್ಲಿ ಔಟ್ ಆದರು. ಈ ಮೂಲಕ ಪವರ್ ಪ್ಲೇ ಹಂತದಲ್ಲಿ ಒಂದು ವಿಕೆಟ್ ಕಳೆದುಕೊಂಡರು ಮುಂಬೈ ಇಂಡಿಯನ್ಸ್ ಆರು ಓವರ್ ಮುಕ್ತಾಯಕ್ಕೆ ಬರೋಬ್ಬರಿ 61 ರನ್ ಸಿಡಿಸಿತು.

ಎರಡನೇ ವಿಕೆಟ್‍ಗೆ ಜೊತೆಯಾದ ನಾಯಕ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ 45 ರನ್‍ಗಳ ಜೊತೆಯಾಟವಾಡಿದರು. ಆದರೆ 10ನೇ ಓವರ್ ಐದನೇ ಬಾಲಿನಲ್ಲಿ ಸೂರ್ಯಕುಮಾರ್ ಯಾದವ್ ಅವರು ಔಟ್ ಆದರು. ಇದೇ ವೇಳೆ ಆರಂಭದಿಂದಲು ಸ್ಫೋಟಕವಾಗಿ ಆಡಿಕೊಂಡು ಬಂದ ನಾಯಕ ರೋಹಿತ್ ಶರ್ಮಾ 36 ಬಾಲಿಗೆ ಅರ್ಧಶತಕ ಸಿಡಿಸಿದರು.

ಮುಂಬೈ ಟ್ರೋಫಿ ಗೆಲ್ಲಲು 20 ರನ್‍ಗಳ ಅವಶ್ಯಕತೆ ಇದ್ದಾಗ ದೊಡ್ಡ ಹೊಡೆತಕ್ಕೆ ಕೈಹಾಕಿದ ರೋಹಿತ್ ಶರ್ಮಾ, 51 ಎಸೆತಗಳಲ್ಲಿ ಐದು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಸಮೇತ 68 ರನ್ ಸಿಡಿಸಿ ಔಟ್ ಆದರು. ರೋಹಿತ್ ನಂತರ ಬಂದು ಎರಡು ಬೌಂಡರಿ ಸಿಡಿಸಿ ಅಬ್ಬರಿಸಿದ್ದ ಕೀರನ್ ಪೊಲಾರ್ಡ್ ಅವರು 9 ರನ್ ಗಳಿಸಿ ಕಗಿಸೊ ರಬಾಡಾ ಅವರಿಗೆ ಬೌಲ್ಡ್ ಆದರು. ಕೊನೆಯ ರನ್ ಬೇಕಿದ್ದಾಗ ಹಾರ್ದಿಕ್ ಪಾಂಡ್ಯ ಕ್ಯಾಚ್ ಕೊಟ್ಟರು. ಕೊನೆಯವರೆಗೂ ಔಟ್ ಆಗದೇ ಉಳಿದ ಇಶಾನ್ ಕಿಶನ್ 19 ಬಾಲಿಗೆ 33 ರನ್ ಸಿಡಿಸಿ ಮುಂಬೈ ಅನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ್ದ ಡೆಲ್ಲಿ ತಂಡ ಆರಂಭದಲ್ಲೇ ಟ್ರೆಂಟ್ ಬೌಲ್ಟ್ ಅವರ ದಾಳಿಗೆ ನಲುಗಿ ಬೇಗ ಮೂರು ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಜೊತೆಯಾದ ಶ್ರೇಯಾಸ್ ಐಯ್ಯರ್ (65 ರನ್, 50 ಎಸೆತ, 6 ಬೌಂಡರಿ. 2 ಸಿಕ್ಸರ್) ಮತ್ತು ರಿಷಭ್ ಪಂತ್ ಇಬ್ಬರೂ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು ಮೇಲೆತ್ತಿದರು. ಪರಿಣಾಮ ಪ್ರಮುಖ ಪಂದ್ಯದಲ್ಲಿ ಡೆಲ್ಲಿ ತಂಡ ಮುಂಬೈ ತಂಡಕ್ಕೆ 157 ರನ್‍ಗಳ ಗುರಿ ನೀಡಿತ್ತು.

Click to comment

Leave a Reply

Your email address will not be published. Required fields are marked *

Advertisement