Connect with us

Cricket

ಸೂಪರ್ ಕ್ಯಾಚ್, ಬೌಲ್ಟ್, ಬುಮ್ರಾ ಡೆಡ್ಲಿ ವೇಗಕ್ಕೆ ರಾಜಸ್ಥಾನ ಧೂಳಿಪಟ

Published

on

– ಮೊದಲ ಸ್ಥಾನಕ್ಕೆ ಜಿಗಿದ ಮುಂಬೈ
– ಶೂನ್ಯಕ್ಕೆ ಇಬ್ಬರು ಪ್ರಮುಖ ಆಟಗಾರರು ಔಟ್

ಅಬುಧಾಬಿ: ಬೌಲಿಂಗ್ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಎಲ್ಲ ವಿಭಾಗದಲ್ಲೂ ಮಿಂಚಿದ ಮುಂಬೈ ರಾಜಸ್ಥಾನ ವಿರುದ್ಧ 57 ರನ್‍ಗಳಿಂದ ಭರ್ಜರಿ ಜಯಗಳಿಸಿ ಮೊದಲ ಸ್ಥಾನಕ್ಕೆ ಜಿಗಿದಿದೆ.

ಇಂದು ಅಬುಧಾಬಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಸೂರ್ಯಕುಮಾರ್ ಯಾದವ್ ಅವರ ಸೂಪರ್ ಬ್ಯಾಟಿಂಗ್‍ನಿಂದ ನಿಗದಿ 20 ಓವರಿನಲ್ಲಿ 193 ರನ್ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ್ದ ರಾಜಸ್ಥಾನ್ ತಂಡ ಆರಂಭದಿಂದಲೇ ಸೋಲಿನ ಕಡೆಗೆ ಹೆಜ್ಜೆ ಹಾಕಿತು. ಮುಂಬೈ ಬೌಲಿಂಗ್ ದಾಳಿಗೆ ನಲುಗಿದ ರಾಯಲ್ಸ್ 18.1 ಓವರಿನಲ್ಲಿ 136 ರನ್ ಗಳಿಸಿ ಆಲೌಟ್ ಆಯ್ತು.

ಸೂಪರ್ ಕ್ಯಾಚ್ ಹಿಡಿದ ಪೊಲಾರ್ಡ್, ಅನುಕುಲ್
ಉತ್ತಮ ಕ್ಯಾಚುಗಳನ್ನು ಹಿಡಿದರೆ ತಂಡ ಸುಲಭವಾಗಿ ಗೆಲ್ಲಬಹುದು ಎಂಬ ಮಾತಿದೆ. ಅಂತಯೇ ಇಂದು ಕೂಡ ಮುಂಬೈ ತಂಡದ ಬದಲಿ ಆಟಗಾರನಾಗಿ ಬಂದ ಅನುಕುಲ್ ರಾಯ್ 8ನೇ ಓವರಿನ ಮೊದಲನೇ ಬಾಲಿನಲ್ಲಿ ಹಿಂಬದಿಯಾಗಿ ಓಡಿ ಜಿಗಿದು ಕ್ಯಾಚ್ ಹಿಡಿದು ಮಹಿಪಾಲ್ ಲೋಮರ್ ಅವರನ್ನು ಔಟ್ ಮಾಡಿದರು. ಇದಾದ ನಂತರ ಸೂಪರ್ ಮ್ಯಾನ್ ರೀತಿ ಜಿಗಿದು ಸೂಪರ್ ಕ್ಯಾಚ್ ಹಿಡಿದ ಪೊಲಾರ್ಡ್ ಅವರು ಸ್ಫೋಟಕ ಬ್ಯಾಟ್ಸ್ ಮ್ಯಾನ್ ಬಟ್ಲರ್ ಅವರನ್ನು ಔಟ್ ಮಾಡಿ ಪಂದ್ಯಕ್ಕೆ ತಿರುವು ನೀಡಿದರು.

ಬೌಲ್ಟ್, ಬುಮ್ರಾ ಮಾರಕ ದಾಳಿ
ಇನ್ನಿಂಗ್ಸ್ ನ ಮೊದಲನೇ ಓವರಿನಿಂದಲೇ ಮುಂಬೈ ತಂಡದ ವೇಗದ ಬೌಲರ್ ಗಳು ಮಾರಕ ದಾಳಿಗೆ ಮುಂದಾದರು. ತನ್ನ ವೇಗದಿಂದ ರಾಯಲ್ಸ್ ತಂಡವನ್ನು ಕಟ್ಟಿ ಹಾಕಿದ ಟ್ರೆಂಟ್ ಬೌಲ್ಟ್ ಅವರು ನಾಲ್ಕು ಓವರ್ ಬೌಲ್ ಮಾಡಿ 26 ರನ್ ಕೊಟ್ಟು ಎರಡು ವಿಕೆಟ್ ಕಬಳಿಸಿದರು. ಇವರಿಗೆ ಸಾಥ್ ಕೊಟ್ಟ ಜಸ್ಪ್ರೀತ್ ಬುಮ್ರಾ ನಾಲ್ಕು ಓವರ್ ಬೌಲ್ ಮಾಡಿ ಬರೋಬ್ಬರಿ 4 ವಿಕೆಟ್ ಪಡೆದು ಕೇವಲ 20 ರನ್ ನೀಡಿ ಮಿಂಚಿದರು. ಜೇಮ್ಸ್ ಪ್ಯಾಟಿನ್ಸನ್ ಎರಡು ವಿಕೆಟ್, ಕೀರನ್ ಪೊಲಾರ್ಡ್ ಮತ್ತು ರಾಹುಲ್ ಚಾಹರ್ ಅವರು ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮುಂಬೈ ತಂಡದ ಟ್ರೆಂಟ್ ಬೌಲ್ಟ್ ಅವರು ಆರಂಭಿಕ ಆಘಾತ ನೀಡಿದರು. ಆರಂಭಿಕನಾಗಿ ಕಣಕ್ಕಿಳಿದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡಿದರು. ಈ ಮೂಲಕ ಸೊನ್ನೆ ಸುತ್ತಿ ಯಶಸ್ವಿ ಜೈಸ್ವಾಲ್ ಅವರು ಪೆವಿಲಿಯನ್ ಸೇರಿದರು. ನಂತರ ದಾಳಿಗೀಳಿದ ಜಸ್ಪ್ರೀತ್ ಬುಮ್ರಾ ಆರು ರನ್ ಗಳಿಸಿದ ನಾಯಕ ಸ್ಟೀವ್ ಸ್ಮಿತ್ ಅವರನ್ನು ಇನ್ ಸ್ವಿಂಗ್ ಬೌಲ್ ಮೂಲಕ ಔಟ್ ಮಾಡಿದರು.

ನಂತರ ಬಂದ ಇನ್ ಫಾರ್ಮ್ ಬ್ಯಾಟ್ಸ್ ಮ್ಯಾನ್ ಸಂಜು ಸ್ಯಾಮ್ಸನ್ ಅವರನ್ನು ಮತ್ತೆ ದಾಳಿ ಮಾಡಿದ ಬೌಲ್ಟ್ ಔಟ್ ಮಾಡಿದರು. ಈ ಮೂಲಕ ರಾಜಸ್ಥಾನದ ಭರವಸೆಯ ಆಟಗಾರನಾಗಿದ್ದ ಸಂಜು ಸ್ಯಾಮ್ಸನ್ ಸೊನ್ನೆ ಸುತ್ತಿ ಪೆವಿಲಿಯನ್ ಸೇರಿದರು. ನಂತರ ಬಟ್ಲರ್ ಮತ್ತು ಮಹಿಪಾಲ್ ಲೋಮರ್ ತಾಳ್ಮೆಯ ಆಟಕ್ಕೆ ಮುಂದಾದರು. ದೊಡ್ಡ ಮೊತ್ತ ಬೆನ್ನಟ್ಟುವಲ್ಲಿ ಆರಂಭದಲ್ಲೇ ಎಡವಿದ ರಾಜಸ್ಥಾನ್ ತಂಡ ಪವರ್ ಪ್ಲೇ ಮುಕ್ತಾಯಕ್ಕೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಕೇವಲ 31 ರನ್ ಗಳಿಸಿತ್ತು.

ನಂತರ ಬಟ್ಲರ್ ಮತ್ತು ಲೋಮರ್ ಸೇರಿಕೊಂಡು ಉತ್ತಮ ಜೊತೆಯಾಟವಾಡುವ ಮುನ್ಸೂಚನೆ ನೀಡಿದರು. ಆದರೆ 8ನೇ ಓವರಿನ ಮೊದಲನೇ ಬಾಲಿನಲ್ಲಿ ಮಹಿಪಾಲ್ ಲೋಮರ್ ಬದಲಿ ಆಟಗಾರ ಅನುಕುಲ್ ರಾಯ್ ಹಿಡಿದ ಉತ್ತಮ ಕ್ಯಾಚಿಗೆ ಬಲಿಯಾಗಿ ಹೊರನಡೆದರು. ಈ ನಡುವೆ ಆರಂಭದಿಂದ ಉತ್ತಮವಾಗಿ ಆಡಿಕೊಂಡು ಬಂದ ಜೋಸ್ ಬಟ್ಲರ್ ಅವರು 34 ಎಸೆತದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು.

70 ರನ್ ಗಳಿಸಿ ಆಕ್ರಮಣಕಾರಿಯಾಗಿ ಆಡುತ್ತಿದ್ದ ಬಟ್ಲರ್ ಅವರು ಕೀರನ್ ಪೊಲಾರ್ಡ್ ಅವರು ಹಿಡಿದ ಅತ್ಯುತ್ತಮ ಕ್ಯಾಚಿಗೆ ಬಲಿಯಾದರು. ಈ ಮೂಲಕ 44 ಬಾಲಿಗೆ ಐದು ಸಿಕ್ಸರ್ ಮತ್ತು 4 ಫೋರ್ ಸಮೇತ 70 ರನ್ ಸಿಡಿಸಿ ಪ್ಯಾಟಿನ್ಸನ್ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ 14ನೇ ಓವರಿನಲ್ಲಿ ಟಾಮ್ ಕುರ್ರನ್ ಅವರು ಪೊಲಾರ್ಡ್ ಬೌಲಿಂಗ್‍ಗೆ ಕ್ಯಾಚ್ ನೀಡಿದರು. ರಾಹುಲ್ ಟಿವಾಟಿಯಾ ಅವರು ಬುಮ್ರಾಗೆ ಬೌಲ್ಡ್ ಆದರು. ನಂತರ ಬಂದ ಶ್ರೇಯಾಸ್ ಗೋಪಾಲ್ ಒಂದು ರನ್ ಹೊಡೆದು 15ನೇ ಓವರಿನಲ್ಲಿ ಕ್ಯಾಚ್ ನೀಡಿದರು. ನಂತರ ಒಂದೇ ಓವರಿನಲ್ಲಿ ಬುಮ್ರಾ ಅವರು ಜೋಫ್ರಾ ಆರ್ಚರ್ ಮತ್ತು ಅಂಕಿತ್ ರಾಜ್‍ಪೂತ್ ಅವರನ್ನು ಔಟ್ ಮಾಡಿದರು.

Click to comment

Leave a Reply

Your email address will not be published. Required fields are marked *