Crime
20 ರೂ. ಇಡ್ಲಿ ಹಣವನ್ನು ಕೇಳಿದ್ದಕ್ಕೆ ವ್ಯಾಪಾರಿಯನ್ನು ಕೊಂದ ಗ್ರಾಹಕರು

ಮುಂಬೈ: ಇಡ್ಲಿ ತಿಂದು 20 ರೂಪಾಯಿ ಹಣ ಕೊಡದೆ ಹೋಗುತ್ತಿದ್ದ ಮೂವರು ಗ್ರಾಹಕರ ಬಳಿ ಹಣ ಕೇಳಿದ್ದಕ್ಕೆ ವ್ಯಾಪಾರಿಯನ್ನು ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಇಡ್ಲಿ ವ್ಯಾಪಾರಸ್ಥನನ್ನು ವೀರೇಂದ್ರ ಯಾದವ್ (26) ಎಂದು ಗುರುತಿಸಲಾಗಿದೆ. ಈತ ಇಡ್ಲಿಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ. ಇಡ್ಲಿ ತಿಂದು ಹಣ ಕೊಡಲು ನಿರಾಕರಿಸಿದ ಮೂವರನ್ನು ಪ್ರಶ್ನೆ ಮಾಡಿದ್ದಕ್ಕಾಗಿ ಮೂವರು ಸೇರಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಇಡ್ಲಿ ತಿಂದು ಹಣ ನೀಡದೆ ಹೋಗಿದ್ದವರಿಗೆ ವ್ಯಾಪಾರಸ್ಥ ವೀರೇಂದ್ರ ನೀವು 20 ರೂಪಾಯಿ ಹಣ ಕೊಡುವುದು ಬಾಕಿ ಇದೆ ಎಂದು ಹೇಳಿದ್ದಾನೆ. ಹಣ ವಿಚಾರವಾಗಿ ಜಗಳವಾಗಿದೆ. ಈ ಜಗಳದಲ್ಲಿ ಕೋಪಗೊಂಡ ಮೂವರು ಗ್ರಾಹಕರು ಇಡ್ಲಿ ವ್ಯಾಪಾರಸ್ಥನನ್ನು ತಳ್ಳಿದ್ದಾರೆ. ಈ ವೇಳೆ ನೆಲಕ್ಕೆ ಬಿದ್ದು ತಲೆಗೆ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ. ಹತ್ತಿರದಲ್ಲಿ ಇದ್ದವರು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮುಂಬೈನ ಮೀರಾ ರಸ್ತೆಯ ನಯಾ ನಗರ ಪೊಲೀಸ್ ಠಾಣೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಮೀರಾ ಭಯಂದರ್ ವಾಸೈ ವಿರಾರ್ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುತ್ತಾರೆ ಎಂದು ಹೇಳಿದ್ದಾರೆ.
