Sunday, 18th August 2019

ತಡವಾಗಿ ಬಂದ್ರೆ ಎಲ್ಲರಿಗೂ 10 ಸಾವಿರ ದಂಡ ಹಾಕಿ – ಕ್ಲಿಕ್ ಆಯ್ತು ಧೋನಿ ಸಲಹೆ

ನವದೆಹಲಿ: ಸಮಯ ಪಾಲನೆ ವಿಚಾರದಲ್ಲಿ ಕಟ್ಟುನಿಟ್ಟಿನ ಸೂತ್ರ ಅಳವಡಿಸಿಕೊಂಡಿದ್ಧ ಧೋನಿ, ದೈಹಿಕ ತರಬೇತಿ ವೇಳೆ ನೀಡಿದ್ದ ಸಲಹೆ ಡ್ರೆಸ್ಸಿಂಗ್ ರೂಂ ವಾತಾವರಣವನ್ನೇ ಬದಲಾಯಿಸಿತ್ತು ಎಂದು ಟೀಂ ಇಂಡಿಯಾ ಪರವಾಗಿ ಕೆಲಸ ಮಾಡಿದ್ದ ಮಾನಸಿಕ ತಜ್ಞ ಪ್ಯಾಡಿ ಅಪ್ಟನ್ ತಿಳಿಸಿದ್ದಾರೆ.

ಅಪ್ಟನ್ ತಮ್ಮ ‘ದಿ ಬೇರ್ ಫುಟ್ ಕೋಚ್’ ಆತ್ಮಚರಿತ್ರೆಯಲ್ಲಿ ಈ ಬಗ್ಗೆ ತಿಳಿಸಿದ್ದು, ತಂಡದಲ್ಲಿ ಆಟಗಾರರ ವಿಚಾರದಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಸಲಹೆ ನೀಡಿದ್ದರು. ಯಾವುದೇ ಆಟಗಾರ ಅಭ್ಯಾಸದ ವೇಳೆ ತಡವಾಗಿ ಬಂದರೆ ಇಡೀ ತಂಡ ಆಟಗಾರರಿಗೆ ತಲಾ 10 ಸಾವಿರ ರೂ. ದಂಡ ವಿಧಿಸಲು ಸಲಹೆ ನೀಡಿದ್ದರು ಎನ್ನುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.

ಪ್ಯಾಡಿ ಅಪ್ಟನ್ ಹೇಳಿದ್ದೇನು?
ನಾನು ಕಾರ್ಯನಿರ್ವಹಿಸುತ್ತಿದ್ದಾಗ ಏಕದಿನ ಪಂದ್ಯಗಳಿಗೆ ಧೋನಿ ಹಾಗೂ ಟೆಸ್ಟ್ ಕ್ರಿಕೆಟ್ ಪಂದ್ಯಗಳಿಗೆ ಅನಿಲ್ ಕುಂಬ್ಳೆ ನಾಯಕತ್ವ ವಹಿಸಿದ್ದರು. ತಂಡದ ಅಭ್ಯಾಸಕ್ಕೆ ಆಟಗಾರರು ತಡವಾಗಿ ಬರುತ್ತಿದ್ದರು.

ಈ ವೇಳೆ ಅಭ್ಯಾಸಕ್ಕೆ ತಡವಾಗಿ ಬರುವ ಆಟಗಾರರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಕುಂಬ್ಳೆ ಜೊತೆ ಚರ್ಚೆ ನಡೆಸಿದೆ. ಚರ್ಚೆಯ ಕೊನೆಗೆ 10 ಸಾವಿರ ರೂ. ದಂಡ ವಿಧಿಸುವ ಪ್ರಸ್ತಾಪವನ್ನು ಕುಂಬ್ಳೆ ಮುಂದಿಟ್ಟರು.

ಇದೇ ವಿಚಾರದ ಕುರಿತು ಮರುದಿನ ಏಕದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಧೋನಿ ಅವರ ಬಳಿ ಚರ್ಚೆ ನಡೆಸಿದೆ. ಈ ವೇಳೆ ಧೋನಿ ಈ ನಿಯಮವನ್ನು ಮತ್ತಷ್ಟು ಕಠಿಣವಾಗಿ ಜಾರಿ ಮಾಡಲು ಮುಂದಾದರು.

“ತಡವಾಗಿ ಬಂದ ಒಬ್ಬ ಆಟಗಾರನಿಗೆ ಮಾತ್ರ 10 ಸಾವಿರ ದಂಡ ವಿಧಿಸುವ ಬದಲಾಗಿ ಇಡೀ ತಂಡದ ಎಲ್ಲಾ ಸದಸ್ಯರಿಗೂ ಕೂಡ ತಲಾ 10 ಸಾವಿರ ದಂಡ ವಿಧಿಸೋಣ” ಎನ್ನುವ ಸಲಹೆ ನೀಡಿದರು. ಈ ಚರ್ಚೆಯ ಬಳಿಕ ಯಾವುದೇ ಆಟಗಾರ ಕೂಡ ಅಭ್ಯಾಸಕ್ಕೆ ತಡವಾಗಿ ಬಂದಿರಲಿಲ್ಲ ಎಂದು ಪ್ಯಾಡಿ ಹೇಳಿದ್ದಾರೆ.

ಧೋನಿ ತಾಳ್ಮೆಯಿಂದ ಪಂದ್ಯವನ್ನು ನಿರ್ವಹಿಸುವುದೇ ತಂಡಕ್ಕೆ ಬಲವಾಗಿತ್ತು, ಧೋನಿ ಒಬ್ಬ ಉತ್ತಮ ನಾಯಕ ಎಂದು ಪ್ಯಾಡಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *