Saturday, 24th August 2019

ಸಚಿನ್, ದ್ರಾವಿಡ್, ಅಜರುದ್ದೀನ್ ದಿಗ್ಗಜರ ಸಾಲಿಗೆ ಸೇರಿದ ಧೋನಿ

ಮೌಂಟ್ ಮೌಂಗಾನೆ: ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯವನ್ನು ಆಡುವ ಮೂಲಕ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಂಡದ ಪರ 334 ಪಂದ್ಯಗಳನ್ನು ಪೂರ್ಣಗೊಳಿಸಿದ್ದು, ಈ ಮೂಲಕ ಅಜರುದ್ದೀನ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ಟೀಂ ಇಂಡಿಯಾ ಪರ ಈಗಾಗಲೇ ಹಲವು ದಾಖಲೆಗಳನ್ನು ನಿರ್ಮಿಸಿರುವ ಧೋನಿ 2004ರಲ್ಲಿ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. 37 ವರ್ಷದ ಧೋನಿ ಸದ್ಯ ಭಾರತದ ಪರ ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿರುವ 3ನೇ ಆಟಗಾರ ಎಂಬ ಹೆಗ್ಗಳಿಕೆಯನ್ನ ಅಜರುದ್ದೀನ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಉಳಿದಂತೆ ಧೋನಿ ಏಷ್ಯಾ ಇಲೆವನ್ ತಂಡದ ಪರ 3 ಪಂದ್ಯಗಳನ್ನು ಆಡಿದ್ದಾರೆ. ಟೀಂ ಇಂಡಿಯಾ ಪರ ಸಚಿನ್ ತೆಂಡೂಲ್ಕರ್ 463 ಪಂದ್ಯಗಳನ್ನು ಆಡಿದ್ದು, ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ರಾಹುಲ್ ದ್ರಾವಿಡ್ ಇದ್ದು, 340 ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಉಳಿದಂತೆ ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಬ್ಯಾಟಿಂಗ್ ಫಾರ್ಮ್ ಗೆ ಮರಳಿರುವ ಧೋನಿ 241ರ ಸರಾಸರಿಯಲ್ಲಿ 241 ರನ್ ಸಿಡಿಸಿದ್ದಾರೆ. ಇಂದಿನ ಪಂದ್ಯದಲ್ಲೂ ಬಿರುಸಿನ ಆಟ ಪ್ರದರ್ಶಿಸಿದ ಧೋನಿ, 33 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 48 ರನ್ ಗಳಿಸಿ ಅಜೇಯರಾಗಿ ಉಳಿದರು. ಅಲ್ಲದೇ ಮುರಿಯದ 5ನೇ ವಿಕೆಟ್‍ಗೆ 53 ರನ್ ಜೊತೆಯಾಟ ನೀಡಿ ತಂಡ ಬೃಹತ್ ಮೊತ್ತಗಳಿಸಲು ಕಾರಣರಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *