Connect with us

ತೇಜಸ್ವಿ ಸೂರ್ಯ ಆಪ್ತ ಸಹಾಯಕನ ಹೆಸರಿನಲ್ಲಿ ವಂಚನೆ- ಎಫ್‍ಐಆರ್ ದಾಖಲು

ತೇಜಸ್ವಿ ಸೂರ್ಯ ಆಪ್ತ ಸಹಾಯಕನ ಹೆಸರಿನಲ್ಲಿ ವಂಚನೆ- ಎಫ್‍ಐಆರ್ ದಾಖಲು

– ಬೆಡ್, ವೆಂಟಿಲೇಟರ್, ರೆಮ್‍ಡಿಸಿವಿರ್ ಕೊಡಿಸುವುದಾಗಿ ಹಣ ಪಡೆದು ವಂಚನೆ

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಆಪ್ತ ಸಹಾಯಕನ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಜಯನಗರ ಠಾಣಾ ವ್ಯಾಪ್ತಿಯ ಕೆಲ ಆಸ್ಪತ್ರೆ ಬಳಿ ಕೊರೊನಾ ರೋಗಿಗಳ ಪೋಷಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಆರೋಪಿ ಶಿವಲಿಂಗಯ್ಯ, ನಾನು ಸಂಸದ ತೇಜಸ್ವಿ ಸೂರ್ಯ ಪಿಎ ಎಂದು ಹೇಳಿಕೊಳ್ಳುತ್ತಿದ್ದ. ನಂತರ ಕೊರೊನಾ ಸಂಬಂಧಿಸಿದ ಚಿಕಿತ್ಸೆ, ಬೆಡ್ ವ್ಯವಸ್ಥೆ, ವೆಂಟಿಲೇಟರ್, ರೆಮ್‍ಡಿಸಿವಿರ್ ಬೇಕಾದರೆ ನಾನು ಕೊಡಿಸುತ್ತೇನೆ ಎಂದು ಹೇಳಿ ಹಣ ಪಡೆದು ವಂಚನೆ ಮಾಡುತ್ತಿದ್ದ.

ಇದೇ ರೀತಿ ವ್ಯಕ್ತಿಯೊಬ್ಬರ ಬಳಿ, ಹತ್ತು ಸಾವಿರ ಹಣ ನೀಡಿದರೆ ಐದು ರೆಮ್‍ಡಿಸಿವಿರ್ ಇಂಜೆಕ್ಷನ್ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದ. ಈ ಸಂಬಂಧ ತೇಜಸ್ವಿ ಸೂರ್ಯರ ಕಚೇರಿ ಬಳಿ ತೆರಳಿ ವಿಚಾರಿಸಿದಾಗ ಆ ವ್ಯಕ್ತಿ ನಕಲಿ ಅನ್ನೋದು ಪತ್ತೆಯಾಗಿತ್ತು. ಅವರ ಬಳಿ ಫೋನ್ ನಂಬರ್ ಪಡೆದು ಖುದ್ದು ತೇಜಸ್ವಿ ಸೂರ್ಯ ಪಿಎ ಭಾನುಪ್ರಕಾಶ್ ಫೋನ್ ಮಾಡಿದಾಗ ನಾನೇ ಅವರ ಪಿಎ ಎಂದು ಶಿವಲಿಂಗಯ್ಯ ಪರಿಚಯ ಮಾಡಿಕೊಂಡಿದ್ದ.

ನಂತರ ಅಸಲಿ ವಿಚಾರ ತಿಳಿದ ಆರೋಪಿ ಶಿವಲಿಂಗಯ್ಯ ಫೋನ್ ಸ್ವೀಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಜಯನಗರ ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

Advertisement
Advertisement