Connect with us

Latest

ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಠಾಣೆಗಳು ಟಿಎಂಸಿ ಕಚೇರಿಗಳಾಗಿವೆ: ತೇಜಸ್ವಿ ಗುಡುಗು

Published

on

– ಬ್ರೀಚ್ ಆಫ್ ಪ್ರಿವಿಲೇಜ್ ಎಚ್ಚರಿಕೆ ನೀಡಿದ ಸೂರ್ಯ
– ಪೊಲೀಸರು ಎಫ್‍ಐಆರ್ ದಾಖಲಿಸಿಲ್ಲವೆಂಬ ಆರೋಪ

ನವದೆಹಲಿ: ಸಂಸತ್‍ನಲ್ಲಿ ಬ್ರೀಚ್ ಆಫ್ ಪ್ರಿವಿಲೇಜ್ ಫೈಲ್ ಮಾಡುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪೊಲೀಸರಿಗೆ ಸಂವಿಧಾನದ ಬಗ್ಗೆ ಪಾಠ ಕಲಿಸುತ್ತೇವೆ ಎಂದು ಪಶ್ಚಿಮ ಬಂಗಾಳದ ಸರ್ಕಾರದ ವಿರುದ್ಧ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ, ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಗುಡುಗಿದ್ದಾರೆ.

ಈ ಕುರಿತು ಟ್ವೀಟ್ ಮಾಡುವ ಮೂಲಕ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಗುಡುಗಿರುವ ಅವರು, ಜರಸಂಕೊ ಠಾಣೆಯ ಮಮತಾ ಪೊಲೀಸರು ಮೂವರು ಸಂಸದರು ನೀಡಿರುವ ದೂರನ್ನು ಕಡೆಗಣಿಸಿದ್ದಾರೆ. ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಕಂಟ್ರಿ ಬಾಂಬ್ ಎಸೆದಿರುವ ಕುರಿತು ಸಂಸದರು ನೀಡಿದ ದೂರಿನ ಆಧಾರದ ಮೇಲೆ ಎಫ್‍ಐಆರ್ ದಾಖಲಿಸಿಲ್ಲ. ಈ ಮೂಲಕ ಮೂವರು ಸಂಸದರನ್ನು ಅವಮಾನಿಸಿದ್ದಾರೆ, ದೂರು ನೀಡಿದ್ದಕ್ಕೆ ಬೆಲೆ ಇಲ್ಲದಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನಾನು ಹಾಗೂ ಸಂಸದರಾದ ನಿಸಿತ್ ಪ್ರಮಣಿಕ್, ಜ್ಯೋತಿರ್ಮಯ ಸಿಂಗ್ ಮಹತೋ ಅವರು ದೂರು ನೀಡಿದಕ್ಕೆ ಪೊಲೀಸರು ಎಫ್‍ಐಆರ್ ದಾಖಲಿಸಿಲ್ಲ. ಇಂತಹ ತಪ್ಪು ಮಾಡಿದ ಹಾಗೂ ಸೊಕ್ಕಿನ ಪೊಲೀಸ್ ಅಧಿಕಾರಿಗಳ ವಿರುದ್ಧ ಸಂಸತ್‍ನಲ್ಲಿ ಬ್ರೀಚ್ ಆಫ್ ಪ್ರಿವಿಲೇಜ್ ಮೋಶನ್ ಮೂವ್ ಮಾಡುತ್ತೇವೆ ಎಂದು ಗುಡುಗಿದ್ದಾರೆ.

ಪೊಲೀಸ್ ಠಾಣೆಗಳು ಟಿಎಂಸಿ ಕಚೇರಿಗಳಾಗಿವೆ:
ನಾವು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸುತ್ತಾರೆ ಎಂದು ಮಧ್ಯರಾತ್ರಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಕಾದಿದ್ದೇವೆ. ಆದರೆ ಎಫ್‍ಐಆರ್ ದಾಖಲಿಸಿದೆ 3 ಸಂಸತ್ ಸದಸ್ಯರಿಗೆ ಅವಮಾನಿಸಿದ್ದಾರೆ. ಹೀಗಾಗಿ ನಾವು ಮೋಶನ್ ಫಾರ್ ಬ್ರೀಚ್ ಆಫ್ ಪ್ರಿವಿಲೇಜ್ ಫೈಲ್ ಮಾಡುತ್ತೇವೆ. ಈ ಮೂಲಕ ಮಮತಾ ಪೊಲೀಸರುಗೆ ಸಂವಿಧಾನದ ಬಗ್ಗೆ ಪಾಠ ಕಲಿಸುತ್ತೇವೆ ಎಂದು ತೇಜಸ್ವಿ ಸೂರ್ಯ ಗುಡುಗಿದ್ದಾರೆ.

ಪೊಲೀಸ್ ಠಾಣೆ ಬಳಿಯ ವಿಡಿಯೋವನ್ನು ಸಹ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದು, ಮಮತಾ ಬ್ಯಾನರ್ಜಿಯವರ ಬಂಗಾಳದಲ್ಲಿ ಪೊಲೀಸ್ ಠಾಣೆಗಳು ಟಿಎಂಸಿ ಪಕ್ಷದ ಕಚೇರಿಗಳಾಗಿ ಮಾರ್ಪಟ್ಟಿವೆ. ಅಪರಾಧ ನಡೆದಿರುವುದನ್ನು ಕಂಡರೂ ಪೊಲೀಸರು ಎಫ್‍ಐಆರ್ ದಾಖಲಿಸಿಲ್ಲ. ಇದರಿಂದಾಗಿ ಕಾನೂನು ಸಂಪೂರ್ಣವಾಗಿ ಕುಸಿದಿರುವುದು ತಿಳಿಯುತ್ತದೆ ಎಂದು ಆರೋಪಿಸಿದ್ದಾರೆ.

ಮತ್ತೊಂದು ಟ್ವೀಟ್‍ನಲ್ಲಿ ಪೊಲೀಸರ ವಿರುದ್ಧ ಕಿಡಿಕಾರಿರುವ ಅವರು, ಬಂಗಾಳದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜರಸಂಕೊ ಪೊಲೀಸ್ ಠಾಣೆ ಮುಂದೆ ಜಮಾವಣೆಯಾಗಿದ್ದಾರೆ. ಪೊಲೀಸರ ಮುಂದೆ ಎರಡು ಆಯ್ಕೆಗಳಿವೆ ಕಾನೂನು ರೀತಿ ಎಫ್‍ಐಆರ್ ದಾಖಲಿಸಿ ಇಲ್ಲವೇ ಪೊಲೀಸ್ ಸಮವಸ್ತ್ರ ತೆಗೆದು ಟಿಎಂಸಿ ಪಕ್ಷದ ಬಾವುಟಗಳನ್ನು ಹಿಡಿಯಿರಿ ಎಂದು ಗುಡುಗಿದ್ದಾರೆ.

ನಬಣ್ಣ ಬಳಿ ಉದ್ವಿಗ್ನ ಪರಿಸ್ಥಿತಿ
ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಗುರುವಾರ ಬಿಜೆಪಿ ಯುವ ಮೋರ್ಚಾದಿಂದ ಜಾಥಾ ನಡೆಸಲಾಗಿತ್ತು. ಈ ವೇಳೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಬಿಜೆಪಿ ಕಾರ್ಯಕರ್ತರು ಹಾಗೂ ಪಶ್ಚಿಮ ಬಂಗಾಳ ಪೊಲೀಸರ ಮಧ್ಯೆ ಭಾರೀ ಪ್ರಮಾಣದ ಸಂಘರ್ಷ ನಡೆದಿತ್ತು. ಅಶ್ರುವಾಯು, ಜಲ ಫಿರಂಗಿ ಹಾಗೂ ಲಾಠಿ ಚಾರ್ಜ್ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿತ್ತು. ಅಲ್ಲದೆ ಜಾಥಾ ವೇಳೆ ತೃಣಮೂಲ ಕಾಂಗ್ರೆಸ್‍ನವರು ಕಂಟ್ರಿ ಬಾಂಬ್ ಎಸೆದಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದರು.

ಪಶ್ಚಿಮ ಬಂಗಾಳದ ಹೌರಾದ ಸಚಿವಾಲಯ ಕಚೇರಿ `ನಬಣ್ಣ’ ಬಳಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪಶ್ಚಿಮ ಬಂಗಾಳದ ಸಚಿವಾಲಯ `ನಬಣ್ಣ’ ಕಡೆಗೆ ಬಿಜೆಪಿ ಯುವ ಮೋರ್ಚಾದ ಮೆರವಣಿಗೆ ತೆರಳುತ್ತಿದ್ದಂತೆ ಪೊಲೀಸರು ಸಾವಿರಾರು ಕಾರ್ಯಕರ್ತರ ಕಡೆಗೆ ಅಶ್ರುವಾಯು ಹಾಗೂ ಜಲಫಿರಂಗಿ ಸಿಡಿಸಿ, ಲಾಠಿ ಪ್ರಹಾರ ನಡೆಸಿದ್ದರು. ಇದರಿಂದಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಬ್ರೀಚ್ ಆಫ್ ಪ್ರಿವಿಲೇಜ್ ಎಂದರೇನು?
ಸಂಸತ್ ಸದಸ್ಯರಿಗೆ ಸಂವಿಧಾನದಲ್ಲಿ ಸಂಸದೀಯ ಸವಲತ್ತುಗಳನ್ನು ನಿಡಲಾಗಿದೆ. ಇದಕ್ಕೆ ಪಾರ್ಲಿಮೆಂಟರಿ ಪ್ರಿವಿಲೇಜ್ ಎನ್ನುತ್ತಾರೆ. ಸಂಸದರು ತಮ್ಮ ವೈಯಕ್ತಿಕ ಸಾಮಥ್ರ್ಯದಿಂದ ಹಕ್ಕು ಚಲಾಯಿಸಬಹುದು ಹಾಗೂ ವಿನಾಯಿತಿಗಳನ್ನು ಸಹ ಇದರ ಅಡಿಯಲ್ಲಿ ನೀಡಲಾಗಿದೆ. ಈ ಯಾವುದೇ ಹಕ್ಕುಗಳು ಹಾಗೂ ವಿನಾಯಿತಿಗಳನ್ನು ಕಡೆಗಣಿಸಿದಾಗ ಇದನ್ನು ಬ್ರೀಚ್ ಆಫ್ ಪ್ರಿವಿಲೇಜ್ ಎಂದು ಕರೆಯಲಾಗುತ್ತದೆ. ಇದು ಸಂಸತ್ತಿನ ಕಾನೂನಿನ ಪ್ರಕಾರ ಶಿಕ್ಷಾರ್ಹವಾಗಿದೆ.

Click to comment

Leave a Reply

Your email address will not be published. Required fields are marked *