Connect with us

Districts

ಯಾರದ್ದೋ ಮನೆಗೆ ಹೋಗಿ ನಾವು ಅಕ್ಕಿ ತಿಂದಿಲ್ಲ: ಮುನಿಯಪ್ಪಗೆ ಮುನಿಸ್ವಾಮಿ ಟಾಂಗ್

Published

on

ಕೋಲಾರ: ಸೋತ ನಂತರ ಹತಾಷರಾಗಿ ಹೀಗೆ ಮಾತನಾಡುತ್ತಿದ್ದಾರೆ. ಯಾರ ಮನೆ ಅಕ್ಕಿಯನ್ನೂ ನಾವು ತಿಂದಿಲ್ಲ. ಸರ್ಕಾರದ ಅಕ್ಕಿ ತಿಂದಿದ್ದೇವೆ ಎಂದು ಸಂಸದ ಎಸ್.ಮುನಿಸ್ವಾಮಿ, ಮಾಜಿ ಸಂಸದ ಕೆ.ಎಚ್.ಮುನಿಯಪ್ಪಗೆ ಟಾಂಗ್ ನೀಡಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ನಿವೃತ್ತ ಯೋಧರ ಕುಟುಂಬ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಮುನಿಯಪ್ಪ ಅವರು ಹಿರಿಯರು. 28 ವರ್ಷಗಳ ಕಾಲ ಸಂಸದರಾಗಿದ್ದವರು. ಅವರ ಬಗ್ಗೆ ಮಾತನಾಡಲ್ಲ ಎನ್ನುತ್ತಲೇ ತಿರುಗೇಟು ನೀಡಿದ್ದಾರೆ.

ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿರುವುದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹೇಳಿದ್ದಾರೆ. ಈ ಮೂಲಕ ಶಾಸಕರು ರಾಜೀನಾಮೆಗೆ ಸಿದ್ಧರಾಗಲಿ, ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ ಎಂದು ಮುನಿಸ್ವಾಮಿ ತಿಳಿಸಿದರು.

ಮಾಜಿ ಸಂಸದರು ಹೇಳಿದ್ದೇನು?:
ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು, ಕಳೆದ ಚುನಾವಣೆಯಲ್ಲಿ ನಾನು ಗೆಲ್ಲಿಸಿದಂಥವರು ಬಿಜೆಪಿ ಅವರೊಂದಿಗೆ ಶಾಮೀಲಾಗಿದ್ದಾರೆ ಎಂಬ ನೋವು ನನಗಿದೆ. ಅಲ್ಲದೆ ಸಿದ್ದರಾಮಯ್ಯ ಅವರ ಅನ್ನಭಾಗ್ಯ ಅಕ್ಕಿ ತಿಂದು ಮೋದಿಗೆ ವೋಟ್ ಹಾಕಿದ್ದಾರೆ. ಅವರು ಇದುವರೆಗೂ ಒಬ್ಬ ಯುವಕನಿಗೆ ಉದ್ಯೋಗ ಕೊಡಿಸಿಲ್ಲ. ಪುಲ್ವಾಮಾ ಹಾಗೂ ಏರ್‍ಸ್ಟ್ರೈಕ್‍ನ ತಂತ್ರಗಾರಿಕೆಯಿಂದ ಮೋದಿ ಜನರನ್ನ ಮೋಡಿ ಮಾಡಿ ಗೆದ್ದಿದ್ದಾರೆ ಎಂದು ಕಿಡಿಕಾರಿದ್ದರು.

ನಾನು ಮಂತ್ರಿಯಾಗಿದ್ದಾಗ ಕೈಗಾರಿಕಾ ಯೋಜನೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಕೆ.ಸಿ.ವ್ಯಾಲಿ ಯೋಜನೆಗೆ ಶ್ರಮಿಸಿದ್ದೇನೆ. ಇನ್ನೂ ನಾನು ಗೆಲ್ಲಸಿದ ನನ್ನ ಹಿತೈಷಿಗಳೇ, ಪಕ್ಷದ ಶಾಸಕರೇ ನನ್ನ ಸೋಲಿಗೆ ಕಾರಣವಾದರು. ಹೈಕಮಾಂಡ್‍ನಲ್ಲಿ ನಿರ್ಧಾರವಾಗಿದೆ. ಸರ್ಕಾರ ಸುಭದ್ರವಾಗಿರಬೇಕು ಎನ್ನುವ ಕಾರಣಕ್ಕೆ ಅಂತಹವರ ಬಗ್ಗೆ ನಾನು ಮಾತನಾಡಲ್ಲ. ಕೆ.ಸಿ.ಯೋಜನೆಯ ಜನಕರೇ ಬೇರೆ, ಲಾಲಿ ಹಾಡಿದವರೇ ಬೇರೆ. ಈ ಕಥೆಯನ್ನ ಸಂಪೂರ್ಣವಾಗಿ ಬಿಚ್ಚಿಡುವೆ ಕಾಯಬೇಕು ಎಂದು ಪರೋಕ್ಷವಾಗಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.