Thursday, 17th October 2019

Recent News

‘ಮೈಸೂರು ಪಾಕ್’ ಹೆಸರಿನಲ್ಲೇ ಮೈಸೂರು ಇದೆ, ಅದನ್ನು ಪ್ರತ್ಯೇಕ ಮಾಡೋಕ್ಕಾಗಲ್ಲ: ಪ್ರತಾಪ್ ಸಿಂಹ

ಮೈಸೂರು: ಲೇಖಕ ಆನಂದ್ ರಂಗನಾಥನ್ ಅವರ ಟ್ವೀಟ್‍ಗೆ ಸಂಸದ ಪ್ರತಾಪ್ ಸಿಂಹ ಸಖತ್ ಟಾಂಗ್ ಕೊಟ್ಟಿದ್ದಾರೆ. ಮೈಸೂರು ಪಾಕ್ ಹೆಸರಲ್ಲೇ ಮೈಸೂರು ಇದೆ. ‘ಪಾಕ್’ದಿಂದ ಮೈಸೂರು ತೆಗೆದರೆ ಅದಕ್ಕೆ ಬೆಲೆ ಇಲ್ಲ. ಅದನ್ನು ಪ್ರತ್ಯೇಕ ಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಪ್ರತಾಪ್ ಸಿಂಹ ಅವರು, ಸದ್ಯ ಭಾರೀ ಚರ್ಚೆಗೆ ಕಾರಣವಾಗಿರುವ ಮೈಸೂರ್ ಪಾಕ್ ಜಿಐ ತಮಿಳು ನಾಡಿಗೆ ಕೊಟ್ಟಿರುವ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಆನಂದ್ ರಂಗನಾಥನ್ ಟ್ವೀಟ್ ಬಗ್ಗೆ ಮಾತನಾಡಿ, ಮೈಸೂರು ತೆಗೆದು ‘ಪಾಕ್’ ಮಾತ್ರ ಇದ್ರೆ ಅದು ಬೇರೆ ಅರ್ಥ ಕೊಡಲಿದೆ. ಮೈಸೂರು ಪಾಕ್ ಅನ್ನು ಬೇರೆ ಅವ್ರಿಗೆ ಕೊಡುವ ಪ್ರಶ್ನೆಯೇ ಇಲ್ಲ. ನಾನೂ ಆನಂದ್ ರಂಗನಾಥ್ ಟ್ವಿಟ್ ಗಮನಿಸಿದ್ದೇನೆ. ಅವರು ಈ ರೀತಿಯ ಕೆಲಸ ಜಾಸ್ತಿ ಮಾಡುತ್ತಾರೆ. ಈ ರೀತಿ ಕಿಡಿಗೇಡಿತನದಿಂದ ಮಾಡುವ ಟ್ವೀಟ್‍ಗಳನ್ನು ನಿರ್ಲಕ್ಷಿಸಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ:ಮೈಸೂರು ಪಾಕ್ ಯಾರಿಗೆ ಸೇರಿದ್ದು?- ಏನಿದು ಜಿಐ ಟ್ಯಾಗ್? ಕರ್ನಾಟಕಕ್ಕೆ ಎಷ್ಟು ಸಿಕ್ಕಿದೆ?

ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ಬಳಿ ಆನಂದ್ ಅವರು ಯಾವ ಉದ್ದೇಶದಿಂದ ಹೋಗಿದ್ದರೋ ಗೊತ್ತಿಲ್ಲ. ಆದರೆ ಕೇಂದ್ರ ಸರ್ಕಾರ ತಮಿಳುನಾಡಿಗೆ ಮೈಸೂರು ಪಾಕ್ ಕೊಟ್ಟಿಲ್ಲ, ಅದು ಶುದ್ದ ಸುಳ್ಳು ಸುದ್ದಿ. ಅವರು ಸಚಿವೆಯ ಜೊತೆ ಫೋಟೋ ಹಾಕಿಕೊಂಡು ಅದಕ್ಕೆ ಏನೋ ಕ್ಯಾಪ್ಷನ್ ಬರೆದುಕೊಂಡರೆ ಅದಕ್ಕೆ ನಾವು ಹೊಣೆಯಲ್ಲ. ಅದು ಅವರವರ ಹೊಣೆಗೇಡಿತನವನ್ನು ತೋರಿಸಿಕೊಡುತ್ತದೆ. ಇಂತಹ ಸುಳ್ಳು ಸುದ್ದಿಯನ್ನು ನಂಬಬೇಡಿ, ಕೇಂದ್ರ ಸರ್ಕಾರ ಮೈಸೂರು ಪಾಕ್ ಜಿಐ ಟ್ಯಾಗ್ ತಮಿಳುನಾಡಿಗೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಲವು ವಸ್ತುಗಳು, ತಿಂಡಿಗಳು ಇತರೇ ಸಾಮಾಗ್ರಿಗಳು ಆಯಾಯ ಪ್ರದೇಶದ ಹೆಸರಿನಿಂದ ಪ್ರಸಿದ್ಧಿಗಳಿಸಿರುತ್ತದೆ. ಉದಾಹರಣೆಗೆ ಮೈಸೂರು ವಿಳ್ಯದ ಎಲೆ, ಮೈಸೂರು ಮಲ್ಲಿಗೆ, ಮೈಸೂರು ಪಾಕ್, ಮೈಸೂರು ಸಿಲ್ಕ್ ಹೀಗೆ ಹೊಲವು ಪದಾರ್ಥಗಳು ಮೈಸೂರಿನಲ್ಲಿ ಮಾತ್ರ ತಯಾರಾಗುತ್ತದೆ ಆದ್ದರಿಂದ ಅವುಗಳ ಹೆಸರಿನೊಂದಿಗೆ ಮೈಸೂರನ್ನು ಕೂಡ ಸೇರಿಸಲಾಗಿದೆ. ಮೈಸೂರು ಪಾಕ್ ಯಾರದ್ದು ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾಗಿ ಈ ಬಗ್ಗೆ ಯಾರೋ ವಿವೇಕವಿಲ್ಲದೆ ಮಾತನಾಡುತ್ತಾರೆ ಎಂದರೆ ಅವರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದರು.

Leave a Reply

Your email address will not be published. Required fields are marked *