Connect with us

Bengaluru City

ನಾವಿಬ್ಬರೂ ಬ್ಯಾಡ್ಮಿಂಟನ್ ಆಡ್ತಾ ಇದ್ವಿ, ತುಂಬಾ ದುಃಖವಾಗ್ತಿದೆ- ಪ್ರಜ್ವಲ್ ಸಂತಾಪ

Published

on

Share this

ಬೆಂಗಳೂರು: ಸ್ಯಾಂಡಲ್‍ವುಡ್ ಉದಯೋನ್ಮುಖ ನಟ ಸಂಚಾರಿ ವಿಜಯ್ ನಿಧನಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಸಂತಾಪ ಸೂಚಿಸಿದ್ದಾರೆ.

ಸಂಚಾರಿ ವಿಜಯ್ ಅವರು ನನ್ನ ಆತ್ಮೀಯ ಸ್ನೇಹಿತರಲ್ಲೊಬ್ಬರು, ನಾವಿಬ್ಬರೂ ಒಟ್ಟಿಗೆ ಬ್ಯಾಡ್ಮಿಂಟನ್ ಆಡ್ತಾ ಇದ್ವಿ ವಿಜಯ್ ಅವರೊಂದಿಗೆ ಸಾಕಷ್ಟು ಸಮಯ ಕಳೆದಿದ್ದೇನೆ. ನಾನು ರಾಷ್ಟ್ರ ಪ್ರಶಸ್ತಿ ತೆಗೆದುಕೊಂಡಿದ್ದೇನೆ ಅನ್ನೋ ಒಂದು ಸಣ್ಣ ಅಹಂ ಕೂಡ ವಿಜಯ್ ಅವರಿಗೆ ಇರಲಿಲ್ಲ. ಅವರಿಗೆ ಸಮಾಜದ ಬಗ್ಗೆ ಒಂದು ವಿಶೇಷ ಕಾಳಜಿ ಇತ್ತು, ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದರು ಎಂದಿದ್ದಾರೆ. ಇದನ್ನೂ ಓದಿ: ’10 ಸಾವಿರಕ್ಕೆ ನಾನ್ಯಾಕ್ ಬರ್ಲಿ ಹೋಗ್ರಿರಿ’ – ಆಯೋಜಕರ ಹೃದಯ ಕದ್ದ ಸಂಚಾರಿ ವಿಜಯ್

ತಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ವಿಜಯ್ ಇಂದು ನಮ್ಮೊಂದಿಗಿಲ್ಲ ಎನ್ನುವುದನ್ನು ಊಹಿಸಲೂ ಕಷ್ಟ ಆಗ್ತಾ ಇದೆ. ಒಬ್ಬ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡ ದುಃಖ ಇಂದು ನನ್ನನ್ನಾವರಿಸಿದೆ ಎಂದು ಪ್ರಜ್ವಲ್ ಬೇಸರ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ವಿಜಯ ಕುಮಾರ್ ಮುಂದೆ ‘ಸಂಚಾರಿ’ ಬಂದಿದ್ದು ಹೇಗೆ?

ಸಂಚಾರಿ ವಿಜಯ್ ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಅಭಿಮಾನಿಗಳಿಗೆ ಕುಟುಂಬ ವರ್ಗದವರಿಗೆ ವಿಜಯ್ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಅವರು ತಿಳಿಸಿದ್ದಾರೆ.

ನಡೆದಿದ್ದೇನು..?
ಶನಿವಾರ ರಾತ್ರಿ ಸ್ನೇಹಿತನ ಜೊತೆ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ವಿಜಯ್ ಮನೆ ಸಮೀಪವೇ ಅಪಘಾತ ಸಂಭವಿಸಿದೆ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿಜಯ್ ಅವರು ಬೈಕಿನಿಂದ ಬಿದ್ದು ತಲೆ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಅವರನ್ನು ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗಿತ್ತು. ಆದರೆ ಗಂಭೀರ ಗಾಯಗೊಂಡಿದ್ದರಿಂದ ನಟ ಕೋಮಾಕ್ಕೆ ಜಾರಿದ್ದರು.

ಇತ್ತ ನಿನ್ನೆ ಬೆಳಗ್ಗೆ ವೈದ್ಯರು ನಟನ ಆರೋಗ್ಯದ ಬಗ್ಗೆ ಮಾತನಾಡಿ ಬ್ರೈನ್ ನಿಷ್ಕ್ರಿಯಗೊಂಡಿದ್ದು, ಉಸಿರಾಡುತ್ತಿದ್ದಾರೆ ಎಂದು ತಿಳಿಸಿದ್ದರು. ಈ ನಡುವೆ ವಿಜಯ್ ಕುಟುಂಬಸ್ಥರು ಅಂಗಾಂಗಗಳನ್ನು ದಾನ ಮಾಡುವುದಾಗಿ ಘೋಷಿಸಿದ್ದರು. ಕುಟುಂಬದ ಇಚ್ಛೆಯಂತೆ 2 ಕಿಡ್ನಿ, 2 ಕಣ್ಣು, ಯಕೃತ್ತು, ಶ್ವಾಸಕೋಶ, 21 ಹೃದಯದ ಕವಾಟಗಳನ್ನು ದಾನ ಮಾಡಿ ಅಂಗಾಂಗ ಕಸಿಗಾಗಿ ಕಾಯುತ್ತಿದ್ದವರಿಗೆ ಜೋಡಿಸಲಾಯಿತು. ಇಂದು ಬೆಳಗ್ಗಿನ ಜಾವ 3:34ಕ್ಕೆ ಸಂಚಾರಿ ವಿಜಯ್ ಮೃತಪಟ್ಟಿದ್ದಾರೆ ಎಂದು ಅಪೋಲೋ ಆಸ್ಪತ್ರೆ ಅಧಿಕೃತವಾಗಿ ತಿಳಿಸಿದೆ.

ಬೆಳಗ್ಗೆ 6:50ಕ್ಕೆ ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಮೃತದೇಹವನ್ನು ವಿಜಯ್ ಕುಟುಂಬಕ್ಕೆ ನೀಡಲಾಗಿದೆ. ಬೆಳಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಮೃತದೇಹವನ್ನು ಚಿಕ್ಕಮಗಳೂರಿನ ಕಡೂರು ತಾಲೂಕಿನ ಪಂಚನಹಳ್ಳಿಗೆ ತೆಗೆದುಕೊಂಡು ಹೋಗಲಾಗಿದ್ದು, ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ.

Click to comment

Leave a Reply

Your email address will not be published. Required fields are marked *

Advertisement