Wednesday, 18th September 2019

Recent News

ತಾಯಿಯ ಪ್ರಾರ್ಥನೆಯಿಂದ ಸಾವನ್ನೇ ಜಯಿಸಿದ ಮಗ

ಅಮರಾವತಿ: ತಾಯಿ ಎಂದರೆ ದೇವರ ರೂಪ ಎಂಬ ಮಾತಿದೆ. ಅದರಂತೆ ತೆಲಂಗಾಣದಲ್ಲಿ ತಾಯಿಯೊಬ್ಬರು ಪವಾಡದ ರೀತಿಯಲ್ಲಿ ಸಾವಿನ ದವಡೆಯಲ್ಲಿದ್ದ ತನ್ನ ಮಗನನ್ನು ಉಳಿಸಿಕೊಂಡಿದ್ದಾರೆ.

ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಪಿಳ್ಳಲಮರಿ ಎಂಬ ಹಳ್ಳಿಯ ಸಿದ್ದಮ್ಮ, ತನ್ನ 18 ವರ್ಷದ ಮಗ ಗಾಂಧಮ್ ಕಿರಣ್‍ಗೆ ಜೂನ್ 26 ರಂದು ವಾಂತಿ ಮತ್ತು ತೀವ್ರ ಭೇದಿ ಕಾಣಿಸಿಕೊಂಡ ಕಾರಣ ಅವನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಚಿಕಿತ್ಸೆ ಆರಂಭವಾದ ನಂತರ ಕಿರಣ್‍ಗೆ ಡೆಂಗ್ಯೂ ಮತ್ತು ಕಾಮಾಲೆ ರೋಗದ ಜೊತೆಗೆ ಹೆಪಟೈಟಿಸ್ ಬಿ ಇರುವುದು ಕಂಡು ಬಂದಿದೆ. ನಂತರ ಅಲ್ಲಿನ ಸರ್ಕಾರಿ ವೈದ್ಯರು ಕಿರಣ್ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಹೈದರಾಬಾದಿನ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ.

ವೈದ್ಯರು ಹೇಳಿದಂತೆ ಮಗನನ್ನು ಕಿರಣ್ ತಾಯಿ ಹೈದರಾಬಾದಿಗೆ ಕರೆದುಕೊಂಡು ಹೋಗಿ ಅಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿಯೂ ಅವರ ಮಗನ ಆರೋಗ್ಯದ ಸ್ಥಿತಿ ಸುಧಾರಿಸದೇ ಕೋಮಾಗೆ ಜಾರಿದ್ದ. ನಂತರ ಜುಲೈ 3 ರಂದು ಅಲ್ಲಿನ ವೈದ್ಯರು ನಿಮ್ಮ ಮಗನ ಮೆದುಳು ಕೆಲಸ ಮಾಡುತ್ತಿಲ್ಲ. ಆತ ಬದುಕುವುದಿಲ್ಲ, ನಮ್ಮಿಂದ ಗುಣಪಡಿಸಲು ಸಾಧ್ಯವಿಲ್ಲ. ಅವನನ್ನು ಮನೆಗೆ ಕರೆದುಕೊಂಡು ಹೋಗಿ ಎಂದು ತಾಯಿ ಸಿದ್ದಮ್ಮನಿಗೆ ಹೇಳಿದ್ದಾರೆ.

ಇದರಿಂದ ನೊಂದ ತಾಯಿ ತನ್ನ ಅರೆ ಪ್ರಜ್ಞಾ ಸ್ಥಿತಿಯಲ್ಲಿದ್ದ ಮಗನನ್ನು ಕರೆದುಕೊಂಡು ತನ್ನ ಹಳ್ಳಿಗೆ ಬಂದಿದ್ದಾಳೆ. ಆದರೆ ಆಗಲೇ ಕಿರಣ್ ಬದುಕುವುದಿಲ್ಲ ಎಂದು ಗ್ರಾಮಸ್ಥರು ಮತ್ತು ಕುಟುಂಬದವರು ಅಂತ್ಯಕ್ರಿಯೆ ಮಾಡಲು ತಯಾರಿ ಮಾಡಿದ್ದರು. ಆದರೆ ಭರವಸೆ ಬಿಡದ ಸಿದಮ್ಮ ತನ್ನ ಮಗನನ್ನು ಸಾಯಲು ಬಿಡದೆ ಅವನ ಹಾಸಿಗೆ ಪಕ್ಕದಲ್ಲೇ ಕುಳಿತುಕೊಂಡು ನಿಮಿಷಕ್ಕೆ ಒಂದು ಬಾರಿ ಮಗನನ್ನು ಕರೆಯುತ್ತಲೇ ಇದ್ದಳಂತೆ.

ಈ ವೇಳೆ ಕಿರಣ್ ನಿಧಾವಾಗಿ ಉಸಿರಾಡುವುದು ಕಂಡು ಬಂದಿದೆ. ಈ ಸಮಯದಲ್ಲಿ ಅಂತ್ಯ ಕ್ರಿಯೆಯನ್ನು ಮುಂದೂಡಿದ ಗ್ರಾಮಸ್ಥರು ಅವನನ್ನು ನೋಡುತ್ತಾ ಕುಳಿತಿದ್ದಾರೆ. ಈ ವೇಳೆ ಕಿರಣ್ ಕಣ್ಣಿನಿಂದ ನೀರು ಬರುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ವೈದ್ಯ ರಾಜಾಬಾಬು ರೆಡ್ಡಿ ತಕ್ಷಣ ಕಿರಣ್‍ನ ಸ್ಥಿತಿಯನ್ನು ಅರಿತು ಹೈದರಾಬಾದಿನಲ್ಲಿ ಚಿಕಿತ್ಸೆ ನೀಡಿದ ವೈದ್ಯರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ನಂತರ ಅ ವೈದ್ಯ ಕಿರಣ್‍ಗೆ ನಾಲ್ಕು ಇಂಜೆಕ್ಷನ್ಸ್ ಕೊಡಲು ಹೇಳಿದ್ದಾರೆ. ನಂತರ ಕಿರಣ್ ಉಸಿರಾಡಲು ಶುರು ಮಾಡಿದ್ದಾನೆ. ನಂತರ ಕಿರಣ್ ನಿಧಾನವಾಗಿ ಚೇತರಿಸಿಕೊಂಡಿದ್ದು, ಈಗ ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ತಾಯಿಯೊಂದಿಗೆ ಮಾತನಾಡುತ್ತಾನೆ ಎಂದು ವೈದ್ಯ ರಾಜಾಬಾಬು ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಸಿದ್ದಮ್ಮ 2005 ರಲ್ಲಿ ತನ್ನ ಪತಿಯನ್ನು ಕಳೆದುಕೊಂಡಿದ್ದರು. ಹೀಗಾಗಿ ಮಗನನ್ನು ಉಳಿಸಿಕೊಳ್ಳಲು ಹಲವು ಪ್ರಯತ್ನ ನಡೆಸಿದರು. ವೈದ್ಯರು ಕೈ ಚೆಲ್ಲಿದ ಪರಿಣಾಮ ಕೊನೆಗೆ ಮಗ ಗುಣಮುಖನಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ತಾಯಿಯ ಪ್ರಾರ್ಥನೆ ಫಲಪ್ರದವಾಗಿದ್ದು ಮಗ ಸಾವಿನ ದವಡೆಯಿಂದ ಪಾರಾಗಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

Leave a Reply

Your email address will not be published. Required fields are marked *