Connect with us

Dharwad

ಮಳೆ ಮಾರುತಗಳ ತೇವಾಂಶವನ್ನೆಲ್ಲ ಹೀರಿಕೊಂಡ ಅಂಫಾನ್ ಚಂಡಮಾರುತ- ಮುಂಗಾರು ವಿಳಂಬ

Published

on

ಧಾರವಾಡ: ಕೊರೊನಾ ಲಾಕ್‍ಡೌನ್‍ದಿಂದ ತತ್ತರಿಸಿ ಹೋಗಿದ್ದ ಉತ್ತರ ಕರ್ನಾಟಕದ ರೈತರು ಈ ಮುಂಗಾರಿನಲ್ಲಾದರೂ ಒಂದಷ್ಟು ಬೆಳೆ ತೆಗೆದುಕೊಳ್ಳೋಣ ಅನ್ನೋ ಲೆಕ್ಕಾಚಾರದಲ್ಲಿದ್ದರು. ಆದರೆ ಮುಂಗಾರು ಮಳೆಯೂ ಸಹ ಈಗ ವಿಳಂಬವಾಗಿ ಬರಲಿದೆ ಅನ್ನೋ ಅಂಶ ತಿಳಿದಿದೆ.

ಈಗಾಗಲೇ ರೈತರು ಮುಂಗಾರು ಬಿತ್ತನೆಗೆ ಕಾದು ಕುಳಿತ್ತಿದ್ದರು. ಆದರೆ ಮುಂಗಾರು ಮಳೆ ವಿಳಂಬವಾಗಿ ಉತ್ತರ ಕರ್ನಾಟಕಕ್ಕೆ ಬರಲಿದೆ ಎಂದು ಧಾರವಾಡ ಕೃಷಿ ವಿವಿ ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಸದ್ಯದ ಹವಾಮಾನ ಅಧ್ಯಯನದ ಪ್ರಕಾರ, ನಾಲ್ಕೈದು ದಿನ ಮುಂಗಾರು ವಿಳಂಬ ಆಗಬಹುದು ಎನ್ನಲಾಗುತ್ತಿದೆ.

ಕಳೆದ ಸಲ ಒಂದು ವಾರ ವಿಳಂಬ ಅಂತ ಮುಂಚಿತವಾಗಿ ತಿಳಿಸಲಾಗಿತ್ತು. ಆದರೆ ಅದು ಮೂರು ವಾರಕ್ಕೆ ಹೋಗಿತ್ತು. ಹೀಗಾಗಿ ನಾಲ್ಕೈದು ದಿನದ ವಿಳಂಬ ಇನ್ನೂ ಹೆಚ್ಚಾದರೂ ಅಚ್ಚರಿ ಇಲ್ಲ. ಇದಕ್ಕೆಲ್ಲ ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಬಂದ ಅಂಫಾನ್ ಚಂಡ ಮಾರುತವೇ ಕಾರಣವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಸುರಿಸಬೇಕಿದ್ದ ಮಳೆ ಮಾರುತಗಳ ತೇವಾಂಶವನ್ನೆಲ್ಲ ಈ ಅಂಫಾನ್ ಸಂಪೂರ್ಣವಾಗಿ ಹೀರಿಕೊಂಡು ಹೋಗಿದೆ. ಇದರಿಂದ ಈ ಭಾಗದಲ್ಲಿ ಆವಿಯಾಗಿ ಮೋಡ ಸೇರಿದ್ದ ನೀರಿನ ಒಂದಂಶ ಮಳೆಯೂ ಈಗ ಸಿಗದಂತಾಗಿದೆ.

ಮತ್ತೊಂದೆಡೆ ಅರಬ್ ತೀರದ ವಾಯುಭಾರ ಕುಸಿತದಿಂದ ಮಳೆ ಬರಲಿದ್ದ ಮಾರುತಗಳು ಸಹ ಸದ್ಯ ಪಶ್ಚಿಮ ದಿಕ್ಕಿನತ್ತ ಚಲನೆ ಆರಂಭಿಸಿವೆಯಂತೆ. ಇದರಿಂದಾಗಿ ಜೂನ್ 1ರ ಹೊತ್ತಿಗೆ ಮುಂಗಾರು ಮಳೆ ಕೇರಳ ಪ್ರವೇಶಿಸಿದರೂ ಅದು ಉತ್ತರ ಕರ್ನಾಟಕ ಭಾಗಕ್ಕೆ ಬರಲು ಕನಿಷ್ಠ ಒಂದು ವಾರ ಬೇಕಾಗಬಹುದು ಎಂದು ಹವಾಮಾನ ತಜ್ಞ ಆರ್.ಎಚ್. ಪಾಟೀಲ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.