ಸೋಮವಾರವೂ ಸದನ ಮುಂದೂಡುವ ಮಾಹಿತಿ ಇದೆ: ಸಿಟಿ ರವಿ

ಬೆಂಗಳೂರು: ಸೋಮವಾರವೂ ಸದನದಲ್ಲಿ ಕಾಲಹರಣ ಮಾಡಿ, ಮುಂದೂಡುತ್ತಾರೆ ಎಂಬ ಮಾಹಿತಿ ಇದೆ. ಅವರು ಅತೃಪ್ತ ಶಾಸಕರಿಗೆ ಗಾಳ ಹಾಕಿಕೊಂಡು, ಯಾವಾಗ ಬೀಳುತ್ತಾರೋ ನೋಡುತ್ತಾ ಕಾಯುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಮೈತ್ರಿ ನಾಯಕರ ವಿರುದ್ಧ ಆರೋಪ ಮಾಡಿದ್ದಾರೆ.

ರಮಡ ರೆಸಾರ್ಟಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ ಅವರು, ಸೋಮವಾರ ವಿಶ್ವಾಸ ಮತ ನಿರ್ಣಯ ಮಂಡನೆ ಮಾಡುತ್ತೇವೆಂದು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ. ಆದರೆ, ನಮಗಿರುವ ಮಾಹಿತಿ ಪ್ರಕಾರ ಸೋಮವಾರ ಕೂಡ ಸದನವನ್ನು ಮುಂದೂಡಬಹುದು ಎಂದು ತಿಳಿದು ಬಂದಿದೆ. ಅತೃಪ್ತ ಶಾಸಕರು ಬರುತ್ತಾರೆ ಎಂದು ಗಾಳ ಹಾಕಿಕೊಂಡು ಮೈತ್ರಿ ನಾಯಕರು ಕಾಯುತ್ತಿದ್ದಾರೆ. ವಿಶ್ವನಾಥ್ ಅವರನ್ನು ಉಳಿಸಿಕೊಳ್ಳಲು ಅಂತಿಮ ಕ್ಷಣದವರೆಗೂ ಯತ್ನಿಸಿದರು. ಆದರೆ, ಸಾಧ್ಯವಾಗಲಿಲ್ಲ. ಹೀಗಿದ್ದರೂ ತಮ್ಮ ವ್ಯರ್ಥ ಪ್ರಯತ್ನವನ್ನು ದೋಸ್ತಿ ನಾಯಕರು ಬಿಡುತ್ತಿಲ್ಲ ಎಂದು ಕಿಡಿಕಾರಿದರು.

ವಿಶ್ವನಾಥ್ ಅವರು ಸರ್ಕಾರದ ಕಾರ್ಯವೈಖರಿಯಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ. ಆದರೆ, ವಿಶ್ವನಾಥ್ ಅವರೂ ಸಹ ವ್ಯಾಪಾರಕ್ಕೊಳಗಾಗಿದ್ದಾರೆ ಎಂದು ಸದನದಲ್ಲಿ ಹೇಳುತ್ತಾರೆ. ಅವರ ಬಗ್ಗೆ ಅಪಹಾಸ್ಯ ಮಾಡಿದ್ದಾರೆ ಎಂದು ಪರೋಕ್ಷವಾಗಿ ಸಾ.ರಾ.ಮಹೇಶ್ ವಿರುದ್ಧ ಕಿಡಿ ಕಾರಿದರು. ಅಲ್ಲದೇ ಅತೃಪ್ತ ಶಾಸಕರಲ್ಲಿ ಶಾಸಕರನ್ನೇ ಖರೀದಿ ಮಾಡುವ ಶಕ್ತಿಯಿದೆ ಎನ್ನುವ ಮೂಲಕ ಮೈತ್ರಿ ಮುಖಂಡರು ಅವರ ಶಾಸಕರನ್ನೇ ಅಪಹಾಸ್ಯ ಮಾಡುತ್ತಿದ್ದಾರೆ ಎಂದರು.

ಸದನದಲ್ಲಿ ನಮ್ಮ ಶಾಸಕರು ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ. ಹಣ ನೀಡಲು ಯತ್ನಿಸಿದರು ಎಂದು ಆರೋಪಿಸಿದ್ದಾರೆ. ಆದರೆ, ಯಾವುದೇ ಶಾಸಕರು ಸದನದಲ್ಲಿ ಮತ್ತೊಬ್ಬರ ಮೇಲೆ ಗಂಭೀರ ಆರೋಪ ಮಾಡುವ ಮುನ್ನ ಸಭಾಧ್ಯಕ್ಷರಿಗೆ ಮಾಹಿತಿ ನೀಡಿ ದಾಖಲೆ ಕೊಡಬೇಕು. ನೋಟಿಸ್ ನೀಡಿ ನಂತರ ಆರೋಪ ಮಾಡಬೇಕು ಆದರೆ, ಇದಾವುದೇ ನಿಯಮಗಳನ್ನು ಮೈತ್ರಿ ನಾಯಕರು ಪಾಲಿಸಿಲ್ಲ ಎಂದು ಆರೋಪಿಸಿದರು.

ಸ್ಪೀಕರ್ ಅವರು ಪದೇ ಪದೇ ಸಂವಿಧಾನದ ನಿಯಮಗಳ ಅಡಿ ಕೆಲಸ ಮಾಡುತ್ತೇನೆ, ನಿಯಮಗಳನ್ನು ಪಾಲಿಸುತ್ತೇನೆ ಎಂದು ಹೇಳುತ್ತಾರೆ. ಆದರೆ, ನೋಟಿಸ್ ನೀಡದೆ ಸದನದಲ್ಲಿ ಆರೋಪ ಮಾಡಲು ಅವಕಾಶ ನೀಡುತ್ತಾರೆ. ಯಾವ ರೀತಿಯ ನಿಯಮವನ್ನು ಸ್ಪೀಕರ್ ಪಾಲಿಸುತ್ತಾರೆ ಎಂದು ಪ್ರಶ್ನಿಸಿದರು. ನಮ್ಮದೇ ಶಾಸಕರನ್ನು ಸೆಳೆಯಲು ಮೈತ್ರಿ ನಾಯಕರು ಯತ್ನಿಸಿದರು ಎಂದು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *