Connect with us

Cricket

ಮೊಹಮ್ಮದ್ ಸಿರಾಜ್ ತಂದೆ ನಿಧನ – ಕೊನೆಯ ಬಾರಿ ಅಪ್ಪನನ್ನು ನೋಡಲಾಗದ ಸ್ಥಿತಿಯಲ್ಲಿ ವೇಗಿ

Published

on

– ಆಟೋ ಓಡಿಸಿ ಮಗನನ್ನು ಟೀಂ ಇಂಡಿಯಾಗೆ ಕಳುಹಿಸಿದ್ದ ಅಪ್ಪ

ನವದೆಹಲಿ: ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅವರ 53 ವರ್ಷದ ತಂದೆ ಮೊಹಮ್ಮದ್ ಗೌಸ್ ಅವರು ಹೈದರಾಬಾದಿನಲ್ಲಿ ವಿಧವಶರಾಗಿದ್ದಾರೆ.

ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಮೊಹಮ್ಮದ್ ಗೌಸ್ ಅವರು ಹಲವಾರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸದ್ಯ ಸಿರಾಜ್ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ತಂದೆಯ ಅಂತ್ಯಕ್ರಿಯೆಗೂ ಬಾರದ ಸ್ಥಿತಿಯಲ್ಲಿ ಇದ್ದಾರೆ. ಕ್ವಾರಂಟೈನ್ ನಿಯಮದ ಪ್ರಕಾರ ಸಿರಾಜ್ ಆಸ್ಟ್ರೇಲಿಯಾದಿಂದ ಬರಲು ಸಾಧ್ಯವಾಗುತ್ತಿಲ್ಲ.

ಈ ವಿಚಾರವಾಗಿ ಕ್ರೀಡಾವಾಹಿನಿಯ ಜೊತೆ ಮಾತನಾಡಿರುವ ಸಿರಾಜ್, ಸಿಡ್ನಿಯಲ್ಲಿ ಅಭ್ಯಾಸ ಮುಗಿಸಿ ಬಂದ ನನಗೆ ತಂದೆಯ ವಿಚಾರವನ್ನು ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿಯವರು ತಿಳಿಸಿದರು. ನಮ್ಮ ತಂದೆ ಯಾವಾಗಲೂ ಹೇಳುತ್ತಿದ್ದರು, ನನ್ನ ಮಗ ನನ್ನ ದೇಶವನ್ನು ಹೆಮ್ಮೆ ಪಡುವಂತೆ ಮಾಡುತ್ತಾನೆ ಎಂದು ಅವರಿಗಾಗಿ ನಾನು ಖಂಡಿತವಾಗಿಯೂ ಅದನ್ನು ಮಾಡೇ ಮಾಡುತ್ತೇನೆ ಎಂದು ಹೇಳಿದ್ದಾರೆ.

ನನಗಾಗಿ ಮತ್ತು ನನ್ನ ಕನಸಿಗಾಗಿ ನನ್ನಪ್ಪ ಆಟೋ ಓಡಿಸಿಕೊಂಡು ಬಹಳ ಕಷ್ಟಪಟ್ಟಿದ್ದಾರೆ. ನಾನು ನನ್ನ ಜೀವನದ ಪ್ರಮುಖ ಬೆಂಬಲವೊಂದನ್ನು ಕಳೆದುಕೊಂಡಿದ್ದೇನೆ. ನಾನು ದೇಶಕ್ಕಾಗಿ ಆಡಬೇಕು ಎಂದು ಅವರು ಕನಸು ಕಂಡಿದ್ದರು. ಎಲ್ಲೋ ಒಂದು ಕಡೆ ಅವರ ಕನಸ್ಸನ್ನು ನನಸು ಮಾಡಿದ್ದೇನೆ ಎಂಬ ಸಂತೋಷವಿದೆ. ಕೊಹ್ಲಿಯವರು ಮತ್ತು ರವಿಶಾಸ್ತ್ರಿಯವರು ಬಂದು ವಿಷಯ ಹೇಳಿದಾಗ ಶಾಕ್ ಆಯ್ತು ಎಂದು ಸಿರಾಜ್ ಹೇಳಿಕೊಂಡಿದ್ದಾರೆ.

ಅಕ್ಟೋಬರ್ 21ರಂದು ಕೋಲ್ಕತ್ತಾ ವಿರುದ್ಧ ಸಿರಾಜ್ ನಾಲ್ಕು ಓವರ್ ಬೌಲ್ ಮಾಡಿ ಕೇವಲ ಎಂಟು ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು. ಅಂದು ಅವರ ತಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಅಂದು ಮ್ಯಾಚ್ ಮುಗಿಸಿ ಮನೆಗೆ ಕಾಲ್ ಮಾಡಿದಾಗ ತಂದೆ ಆಸ್ಪತ್ರೆಯಿಂದ ಮನೆಗೆ ಬಂದಿದ್ದರು. ಆಗ ನಾನು ಇಂದು ಎರಡು ಗುಡ್ ನ್ಯೂಸ್, ಮ್ಯಾಚ್ ಗೆದ್ದಿದ್ದೇವೆ ಜೊತೆಗೆ ಅಪ್ಪ ವಾಪಸ್ ಮನೆಗೆ ಬಂದಿದ್ದಾರೆ ಎಂದು ಖುಷಿಪಟ್ಟಿದೆ ಎಂದು ಸಿರಾಜ್ ತಿಳಿಸಿದ್ದಾರೆ.

ಐಪಿಎಲ್‍ನಲ್ಲಿ ನಾನು ಚೆನ್ನಾಗಿ ಆಡಿದ್ದ ದಿನ ನನ್ನ ತಂದೆ ನನಗೆ ಕರೆ ಮಾಡಿ ನಿನ್ನ ಫೋಟೋ ಪೇಪರಿನಲ್ಲಿ ಬಂದಿದೆ. ದಿನ ಪೂರ್ತಿ ಜನ ನನ್ನ ಕರೆದು ನಿನ್ನ ಮಗ ಐಪಿಎಲ್ ಚೆನ್ನಾಗಿ ಆಡುತ್ತಿದ್ದಾನೆ ಎಂದು ಹೇಳುತ್ತಿದ್ದಾರೆ ಎಂದು ಹೇಳಿದ್ದರು ಎಂದು ತಂದೆಯ ನೆನಪನ್ನು ಸಿರಾಜ್ ಹಂಚಿಕೊಂಡಿದ್ದಾರೆ. ಸದ್ಯ ಸಿರಾಜ್ ಈಗ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದು, ಆಸ್ಟ್ರೇಲಿಯಾದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in