Connect with us

Bengaluru City

ಗೆದ್ದು ಸೋತ ನಲಪಾಡ್ ಪಟ್ಟಾಭಿಷೇಕಕ್ಕೆ ಡಿಕೆ ಸಹೋದರರಿಂದ ತೆರೆಮರೆಯ ಪ್ರಯತ್ನ?

Published

on

ಬೆಂಗಳೂರು: ಇತ್ತೀಚೆಗೆ ನಡೆದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದು ಸೋತ ಮೊಹಮ್ಮದ್ ನಲಪಾಡ್‍ಗೆ ಪಟ್ಟಾಭಿಷೇಕ ಕಟ್ಟಲು ತೆರೆಮರೆಯ ಪ್ರಯತ್ನ ನಡೆಯುತ್ತಿದೆಯಾ ಎಂಬ ಪ್ರಶ್ನೆ ಇದೀಗ ಎದ್ದಿದೆ.

ರಾಜ್ಯ ಯುವ ಕಾಂಗ್ರೆಸ್ ಪಟ್ಟ ಕಳೆದುಕೊಂಡ ನಲಪಾಡ್ ಬೆನ್ನಿಗೆ ಡಿಕೆ ಸಹೋದರರು ನಿಂತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಅವಕಾಶ ಕಳೆದುಕೊಂಡ ನಲಪಾಡ್ ಪರವಾಗಿ ದೆಹಲಿ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಚುನಾವಣೆಯಲ್ಲಿ ಗೆದ್ದರೂ ಕ್ರಿಮಿನಲ್ ಹಿನ್ನೆಲೆಯ ಕಾರಣಕ್ಕೆ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟವನ್ನು ಮೊಹಮ್ಮದ್ ನಲಪಾಡ್ ಕಳೆದುಕೊಂಡಿದ್ದಾರೆ. ಆದರೆ ನಲಪಾಡ್‍ಗಾಗಿ ಹೊಸ ಹುದ್ದೆ ಸೃಷ್ಟಿಗೆ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಕಸರತ್ತು ನಡೆಸಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷನಾಗಿ ನಲಪಾಡ್ ನೇಮಕಕ್ಕೆ ಡಿಕೆ ಸಹೋದರರು ಯತ್ನ ನಡೆಸಿದ್ದಾರೆ.

ಚುನಾವಣೆಯಲ್ಲಿ ಗೆದ್ದರೂ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಂಚಿತನಾಗಿರುವುದರಿಂದ ನಲಪಾಡ್‍ಗೆ ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿ ಆಗಲೇಬೇಕು ಎಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ. ನಲಪಾಡ್‍ಗಾಗಿ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿ ಆಗುತ್ತಾ? ಡಿಕೆ ಸಹೋದರರ ಬೇಡಿಕೆಯನ್ನು ಹೈಕಮಾಂಡ್ ಒಪ್ಪುತ್ತಾ ಎಂಬ ಪ್ರಶ್ನೆ ಎದ್ದಿದೆ.

ಈ ಚುನಾವಣೆಯಲ್ಲಿ ನಲಪಾಡ್ 64,203 ಮತ ಪಡೆದಿದ್ದರೆ ರಕ್ಷಾ ರಾಮಯ್ಯ 57,271 ಮತ ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದರು. ಆದರೆ ರಕ್ಷಾ ರಾಮಯ್ಯ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಎಐಸಿಸಿಯಿಂದ ನಲಪಾಡ್ ಸ್ಪರ್ಧೆಯನ್ನೇ ಅನುರ್ಜಿತ ಎಂದು ಘೋಷಣೆ ಮಾಡಲಾಗಿದೆ. ಎಐಸಿಸಿ ಚುನಾವಣಾ ಸಮಿತಿ ಹಾಗೂ ಶಿಸ್ತುಪಾಲನ ಸಮಿತಿ ನಲಪಾಡ್ ಹಿನ್ನೆಲೆಯನ್ನು ಗಮನಿಸಿ ಸ್ಪರ್ಧೆಯನ್ನೇ ಅಸಿಂಧುಗೊಳಿಸುವ ತೀರ್ಮಾನ ಮಾಡಿದೆ.

ನಲಪಾಡ್ ಸ್ಪರ್ಧೆಯನ್ನು ಅಸಿಂಧುಗೊಳಿಸಿದ ಕಾರಣ ಮಾಜಿ ಸಚಿವ ಸೀತಾರಾಂ ಪುತ್ರ ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಪಟ್ಟ ಸಿಕ್ಕರೆ ಮೂರನೇ ಸ್ಥಾನ ಪಡೆದ ಮಂಜುನಾಥ್ ಉಪಾಧ್ಯಕ್ಷರಾಗಿ ಆಯ್ಕೆ ಆಗಲಿದ್ದಾರೆ. ಯೂತ್ ಕಾಂಗ್ರೆಸ್ ಚುನಾವಣೆ ಜ.10 ರಿಂದ ಜ.12ರವರೆಗೆ ನಡೆದಿತ್ತು.

Click to comment

Leave a Reply

Your email address will not be published. Required fields are marked *