Thursday, 20th February 2020

ಪ್ರಧಾನಿಗಳ ಭೂತಾನ್ ಪ್ರವಾಸ ಅಂತ್ಯ- 10 ಒಪ್ಪಂದಗಳಿಗೆ ಸಹಿ

– ಭೂತಾನ್ ಹಾಡಿ ಹೊಗಳಿದ ಪ್ರಧಾನಿ ಮೋದಿ

ಥಿಂಪು: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡು ದಿನಗಳ ಭೂತಾನ್ ಪ್ರವಾಸವನ್ನು ಪೂರ್ಣಗೊಳಿಸಿ ಇಂದು ತಾಯ್ನಾಡಿಗೆ ಹಿಂದಿರುಗುತ್ತಿದ್ದಾರೆ.

ಭೂತಾನ್‍ನ ವಿವಿಧ ನಾಯಕರನ್ನು ಭೇಟಿ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹಿಂದಿರುಗುತ್ತಿದ್ದು, ಥ್ಯಾಂಕ್ಯೂ ಭೂತಾನ್, ಇದು ಸದಾ ನೆನಪಿನಲ್ಲಿಡುವ ಭೇಟಿಯಾಗಿದೆ. ಎರಡು ದಿನಗಳ ಕಾಲ ಭೂತಾನ್ ಜನತೆ ತೋರಿಸಿದ ವಾತ್ಸಲ್ಯವನ್ನು ನಾನು ಎಂದಿಗೂ ಮರೆಯುವುದಿಲ್ಲ. ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಗೌರವ ಸ್ವೀಕರಿಸಿದ್ದೇನೆ. ಭೇಟಿಯಿಂದ ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧ ವೃದ್ಧಿಯಾಗಿದೆ ಎಂದು ಭೂತಾನ್‍ನಿಂದ ನಿರ್ಗಮಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಮೋದಿ ಅವರು ಶನಿವಾರ ಬೆಳಗ್ಗೆ ಭೂತಾನ್‍ಗೆ ತಲುಪಿದ್ದರು. ಇದು ಮೋದಿ ಭೂತಾನ್‍ಗೆ ನೀಡುತ್ತಿರುವ ಎರಡನೇ ಭೇಟಿಯಾಗಿದೆ. ಮೋದಿ ಅವರ ಎರಡನೇ ಅವಧಿಯಲ್ಲಿ ಇದು ಮೊದಲ ಭೇಟಿಯಾಗಿದೆ. ಪ್ರಧಾನಿ ಮೋದಿ ಭೂತಾನ್ ಪ್ರಧಾನಿ ಲೋಟೈ ತ್ಸೆರಿಂಗ್ ಅವರೊಂದಿಗೆ ಶನಿವಾರ ಮಾತುಕತೆ ನಡೆಸಿದರು. ಹಲವು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಭಾಗಿತ್ವವನ್ನು ಇನ್ನಷ್ಟು ವಿಸ್ತರಿಸುವ ಕ್ರಮದ ಕುರಿತು ಚರ್ಚಿಸಿದರು.

ಎರಡೂ ದೇಶಗಳ ಮಧ್ಯೆ ಒಟ್ಟು 10 ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಬಾಹ್ಯಾಕಾಶ ಸಂಶೋಧನೆ, ವಾಯುಯಾನ, ಐಟಿ, ವಿದ್ಯುತ್ ಮತ್ತು ಶಿಕ್ಷಣ ಸೇರಿದಂತೆ ವಿವಿಧ ವಲಯಗಳಲ್ಲಿ ಹೊಸ ಶಕ್ತಿಯನ್ನು ತುಂಬುವ ಉದ್ದೇಶ ಹೊಂದಲಾಗಿದೆ.

ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗೇಲ್ ವಾಂಗ್‍ಚಕ್ ಅವರನ್ನು ಭೇಟಿ ಮಾಡಿ ಇತರರಿಗೆ ಮಾದರಿಯಾಗಿರುವ ಭೂತಾನ್-ಭಾರತದ ಸಹಭಾಗಿತ್ವವನ್ನು ಮುಂದುವರಿಸುವಂತೆ ಮನವಿ ಮಾಡಿದರು. ನಂತರ ಭೂತಾನ್‍ನ ನಾಲ್ಕನೇ ರಾಜ ಜಿಗ್ಮೆ ಸಿಂಗ್ಯೆ ವಾಂಗ್‍ಚುಕ್ ಅವರನ್ನು ಭೇಟಿ ಮಾಡಿ, ಭಾರತ-ಭೂತಾನ್‍ನ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಅವರ ನಿರಂತರ ಮಾರ್ಗದರ್ಶನಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾನುವಾರ ಭೂತಾನ್‍ನ ಪ್ರತಿಷ್ಠಿತ ರಾಯಲ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಪರಿಶ್ರಮದಿಂದ ಹಿಮಾಲಯದ ರಾಷ್ಟ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.

ಶನಿವಾರ ಅದ್ಧೂರಿ ಸ್ವಾಗತ
ಭೂತಾನ್ ಪ್ರಧಾನಿ ಲೋಟೈ ತ್ಸೆರಿಂಗ್ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಎರಡು ದಿನಗಳ ಪ್ರವಾಸ ಕೈಗೊಂಡಿದ್ದರು. ಥಿಂಪುವಿನಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂತಾನ್ ಪ್ರಧಾನಿ ಡಾ.ಲೋಟೈ ತ್ಸೆರಿಂಗ್ ಅದ್ಧೂರಿಯಾಗಿ ಸ್ವಾಗತಿಸಿದ್ದರು. ಈ ವೇಳೆ ಪುಟ್ಟ ಬಾಲಕಿಯೊಬ್ಬರು ಮೋದಿ ಅವರಿಗೆ ಪುಷ್ಪಗುಚ್ಚ ನೀಡಿ, ವಿಶೇಷ ಗೌರವ ಸಲ್ಲಿಸಿದ್ದರು.

ಥಿಂಪು ವಿಮಾನ ನಿಲ್ದಾಣದಲ್ಲಿ ಅನೇಕರು ಭಾರತ ತ್ರಿವರ್ಣ ಧ್ವಜ ಹಿಡಿದು ಸ್ವಾಗತಿಸಿ, ಮೋದಿ ಪರ ಘೋಷಣೆ ಕೂಗಿದ್ದರು. ವಿಮಾನ ನಿಲ್ದಾಣದಿಂದ ವಾಹನದಲ್ಲಿ ಪ್ರಯಾಣ ಬೆಳೆಸಿದ ಮೋದಿ ಅವರಿಗೆ ದಾರಿಯುದ್ದಕ್ಕೂ ಮಹಿಳೆಯರು, ವಿದ್ಯಾರ್ಥಿಗಳು, ಶಿಕ್ಷಕರು, ಜನಸಾಮಾನ್ಯರು ಕೈ ಬೀಸಿ ಆತ್ಮೀಯತೆ ಮೆರೆದಿದ್ದರು.

ಭೂತಾನ್‍ಗೆ ತಲುಪಿದ ಬಳಿಕ ಟ್ವೀಟ್ ಮಾಡಿದ್ದ ಮೋದಿ, ಭೂತಾನ್ ಪ್ರಧಾನಿಯ ಆತ್ಮೀಯ ಸ್ವಾಗತ ನಿಜಕ್ಕೂ ತುಂಬಾ ಖುಷಿಕೊಟ್ಟಿದೆ. ಅಲ್ಲದೇ ತ್ಸೆರಿಂಗ್ ಆತಿಥ್ಯ ಹೃತ್ಪೂರ್ವಕವಾಗಿತ್ತು ಎಂದು ಹೇಳಿದ್ದಾರೆ. ಭೂತಾನ್ ಪ್ರಧಾನಿ ಲೋಟೈ ತ್ಸೆರಿಂಗ್ ಅವರು ಟ್ವೀಟ್ ಮಾಡಿ, ದಾರಿಯುದ್ದಕ್ಕೂ ನಿಂತು ಸ್ವಾಗತಕೋರಿದ ಮಹಿಳೆಯರು, ವಿದ್ಯಾರ್ಥಿಗಳು, ಶಿಕ್ಷಕರು, ಜನಸಾಮಾನ್ಯರಿಗೆ ಪ್ರಧಾನಿ ಕೈ ಬೀಸಿ ಪ್ರತಿಕ್ರಿಯೆ ನೀಡಿದರು. ಇದು ಅವರ ಆತ್ಮೀಯತೆಯನ್ನು ತೋರಿಸುತ್ತದೆ ಹಾಗೂ ಮಕ್ಕಳ ಮೇಲಿನ ವಾತ್ಸಲ್ಯವನ್ನು ಸ್ಪಷ್ಟಪಡಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

Leave a Reply

Your email address will not be published. Required fields are marked *