Thursday, 21st November 2019

ಫಲಿತಾಂಶದ ಮೇಲೆ ಸಮ್ಮಿಶ್ರ ಸರ್ಕಾರದ ಭವಿಷ್ಯ : ಶಾಸಕ ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇನ್ನು ನಾಲ್ಕು ವರ್ಷ ಇರಬೇಕು ಎಂಬ ಆಸೆ ನಾನು ಹೊಂದಿದ್ದು, ಆದರೆ ಲೋಕಸಭಾ ಚುನಾವಣೆ ಫಲಿತಾಂಶ ಬಂದ ಮೇಲೆ ಏನೇನು ಬದಲಾವಣೆ ಆಗುತ್ತೆ ನೋಡಬೇಕು. ನಾನು ಈಗ ದೈಹಿಕವಾಗಿ ಮಾನಸಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ. ಭವಿಷ್ಯದಲ್ಲಿ ಏನೂ ಬೇಕಾದರು ಆಗಬಹುದು ಎಂದು ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳಿನ ಫಲಿತಾಂಶ ಸರ್ಕಾರದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ಕಾದುನೋಡಬೇಕು. ಮೈತ್ರಿ ಸರ್ಕಾರ ಚುನಾವಣೆ ಫಲಿತಾಂಶದ ಮೇಲೆಯೇ ಇದೆ. ಎಲ್ಲರನ್ನು ಪರಸ್ಪರ ಪ್ರೀತಿಯಿಂದ ಕರೆದುಕೊಂಡು ಹೋದರೆ ಸರ್ಕಾರ ಮುಂದಿನ 4 ವರ್ಷ ಸುಭದ್ರವಾಗಿರುತ್ತದೆ ಎಂದರು.

ಈ ಹಿಂದೆ ಸರ್ಕಾರವನ್ನು ನಾನು ಅಪವಿತ್ರ ಮೈತ್ರಿ ಹೇಳಿದ್ದೆ, ಆದರೆ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಲೋಕಸಭಾ ಚುನಾವಣೆಯನ್ನ ಮೈತ್ರಿ ಮೂಲಕ ಎದುರಿಸುವುದರಿಂದ ನಮಗೆ 15ಕ್ಕೂ ಹೆಚ್ಚು ಸ್ಥಾನಗಳು ಬರಬೇಕು. ಕಡಿಮೆ ಬಂದರೆ ನಾಯಕತ್ವದಲ್ಲಿ ಎಡವಿದ್ದೇವೆ ಅನ್ನಿಸುತ್ತದೆ. ನನಗೆ ಈಗಲೂ ನಂಬಿಕೆ ಇದೆ 15ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ತಮ್ಮ ತಮ್ಮ ಇವಿಎಂ ಟ್ವೀಟ್ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಇವಿಎಂ ಬಗ್ಗೆ ನನ್ನ ಅಭಿಪ್ರಾಯ ಹೇಳಿದ್ದೇನೆ ಹೊರತು ಬೇರೆ ಯಾವುದೇ ಉದ್ದೇಶದಿಂದ ಟ್ವೀಟ್ ಮಾಡಿಲ್ಲ. ಎಕ್ಸಿಟ್ ಪೋಲ್ ಮಾತ್ರವೇ ಫಲಿತಾಂಶ ಅಲ್ಲ, ನಾಳೆ ಫಲಿತಾಂಶ ಹೊರಬರುತ್ತೆ. ಫಲಿತಾಂಶ ಬರುವವರೆಗೆ ಇವಿಎಂ ಬಗ್ಗೆ ತಲೆ ಕೆಡಿಸಿಕೊಳ್ಳೋದು ಬೇಡ ಎಂಬುದು ನನ್ನ ಅಭಿಪ್ರಾಯ. ಇವಿಎಂ ಮೋಸದಿಂದ ಕೂಡಿದೆ ಎಂದು ಆಂಧ್ರ ಸಿಎಂ ಚಂದ್ರಬಾಬು ಹೇಳಿದ್ದು, 2004 ರಿಂದ ಇವಿಎಂ ವ್ಯವಸ್ಥೆ ನಡೆಯುತ್ತಿದ್ದು, 2004 ಮತ್ತು 2009 ರಲ್ಲಿ ಯುಪಿಎ ಅಧಿಕಾರ ನಡೆಸಿದೆ. ಆಗಿನಿಂದಲೂ ಇವಿಎಂ ವ್ಯವಸ್ಥೆಯಿದೆ. ಹೀಗಾಗಿ ಇವಿಎಂ ಬಗ್ಗೆ ಶಂಕೆ ವ್ಯಕ್ತಪಡಿಸುವುದು ಬೇಡ. ಹೀಗಾಗಿ ಜವಾಬ್ದಾರಿಯಿಂದ ಈ ವಿಚಾರದಲ್ಲಿ ನಡೆದುಕೊಳ್ಳಬೇಕು ಎಂದರು.

Leave a Reply

Your email address will not be published. Required fields are marked *