Connect with us

Bengaluru City

ರಮೇಶ್ ಜಾರಕಿಹೊಳಿ ‘ಸಿಹಿ ಸುದ್ದಿ’ ಬಗ್ಗೆ ರೇಣುಕಾಚಾರ್ಯ ಮಾತು

Published

on

ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿ ದೆಹಲಿಯಿಂದ ವಾಪಾಸಾಗುತ್ತಿದ್ದಂತೆ ಶಾಸಕರಾದ ರೇಣುಕಾಚಾರ್ಯ ಹಾಗೂ ಮಹೇಶ್ ಕುಮಟಳ್ಳಿ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಭೇಟಿ ಬಳಿಕ ಮಾತನಾಡಿದ ಶಾಸಕ ರೇಣುಕಾಚಾರ್ಯ, ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಈಗಾಗಲೇ ದೆಹಲಿಯಲ್ಲಿ ಚರ್ಚೆ ಮಾಡಿ ಬಂದಿದ್ದಾರೆ. ಯಾಕೆ ವಿಳಂಬವಾಗುತ್ತಿದೆ ಎಂದು ಸಿಎಂ ಪ್ರಶ್ನಿಸುವಷ್ಟು ನಾನು ದೊಡ್ಡವನಲ್ಲ. ತಾಳ್ಮೆಯಿಂದ ಕಾಯುತ್ತೇನೆ, ಮನುಷ್ಯನಿಗೆ ತಾಳ್ಮೆ, ಸಂಯಮ ಬಹಳ ಮುಖ್ಯ. ಸಿಎಂ, ರಾಜ್ಯಾಧ್ಯಕ್ಷರ ನಿರ್ಧಾರಕ್ಕೆ ನಾನು ಬದ್ಧ ಎಂದು ತಿಳಿಸಿದರು.

ರಮೇಶ್ ಜಾರಕಿಹೊಳಿಯವರನ್ನು ನೀರಾವರಿ ವಿಚಾರವಾಗಿ ಭೇಟಿ ಮಾಡಿದ್ದೆ. ಅವರು ನಮ್ಮ ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿದ್ದರಲ್ಲಿ ತಪ್ಪೇನಿದೆ. ರಮೇಶ್ ಜಾರಕಿಹೊಳಿ ಸಂತೋಷ್ ಅವರನ್ನ ಭೇಟಿ ಮಾಡಿದ್ದರಲ್ಲಿ ತಪ್ಪಿಲ್ಲ. ನಾನೂ ದೆಹಲಿಗೆ ಹೋದರೆ ಭೇಟಿ ಮಾಡಿ ಬರುತ್ತೇನೆ ಎಂದರು.

ಕೆಲವು ಸಚಿವರನ್ನು ಕೈ ಬಿಡಬೇಕೆಂಬ ವಿಚಾರದ ಕುರಿತು ಮಾತನಾಡಿದ ಅವರು, ಸಿಎಂ ಮತ್ತು ಅಧ್ಯಕ್ಷರಿಗೆ ಈ ಬಗ್ಗೆ ಹೇಳಿದ್ದೇನೆ. ಅಲ್ಲದೆ ನಾವು ಶಾಸಕರು ರೆಸಾರ್ಟ್ ನಲ್ಲಿ ಸಭೆ ಮಾಡಿಲ್ಲ. ಸಿಎಂ ಮತ್ತು ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿದ್ದೇವೆ. ನಮ್ಮ ಅಭಿಪ್ರಾಯಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿದ್ದೇವೆ ಎಂದರು.

ರಮೇಶ್ ಜಾರಕಿಹೊಳಿ ಮತ್ತೊಂದು ಪವರ್ ಸೆಂಟರ್ ಅಲ್ಲ. ಯಾಕೆ ಮಾಧ್ಯಮಗಳು ಅವರನ್ನು ಮತ್ತೊಂದು ಪವರ್ ಸೆಂಟರ್ ಎನ್ನುತ್ತೀರಿ. ವಿನಾಕಾರಣ ಪವರ್ ಸೆಂಟರ್ ಎನ್ನುವುದು ಸರಿಯಲ್ಲ. ಶಾಸಕರ್ಯಾರೂ ಸಚಿವಗಿರಿಗಾಗಿ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಪ್ರತ್ಯೇಕ ಸಭೆ ನಡೆಸಿಲ್ಲ. ರೆಸಾರ್ಟ್ ಗೆ ಹೋಗಿ ಸಭೆ ನಡೆಸಿಲ್ಲ, ಪಕ್ಷದ ಚೌಕಟ್ಟು ಮೀರಿ ವರ್ತಿಸಿಲ್ಲ. ನಾನು ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸೇರಿದ್ದಕ್ಕೆ ಸಚಿವರು ಬಹಿರಂಗ ವಾಗಿ ಆಕ್ಷೇಪ ವ್ಯಕ್ತಪಡಿಸಲಿ. ಆಗ ನಾನು ಸಹ ನನ್ನ ಸ್ಟೈಲ್ ನಲ್ಲೇ ಉತ್ತರ ಕೊಡುತ್ತೇನೆ ಎಂದು ಹೇಳಿದರು.

ಸಚಿವ ಸ್ಥಾನ ಉಳಿಸಿಕೊಳ್ಳಲು ಕೆಲ ಸಚಿವರು ಪ್ರತ್ಯೇಕ ಸಭೆ ನಡೆಸಿರುವ ವಿಚಾರದ ಕುರಿತು ಮಾತನಾಡಿದ ಅವರು, ಪಕ್ಷದಲ್ಲಿ ಇರುವ ಎಲ್ಲ ಸಚಿವರು ನನ್ನ ಸ್ನೇಹಿತರು. ನಾನು ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ಯಾರ ಬಗ್ಗೆಯೂ ನನಗೆ ದ್ವೇಷ ಇಲ್ಲ ಆದರೆ ಅಧ್ಯಕ್ಷರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಹೌದು ಎಂದಿದ್ದಾರೆ. ಈ ಮೂಲಕ ಪ್ರತ್ಯೇಕ ಸಭೆ ನಡೆಸಿದ್ದ ಸಚಿವರ ವಿರುದ್ಧ ರಾಜ್ಯಾಧ್ಯಕ್ಷರಿಗೆ ದೂರು ನೀಡಿದ್ದನ್ನು ಪರೋಕ್ಷವಾಗಿ ರೇಣುಕಾಚಾರ್ಯ ಸಮರ್ಥಿಸಿಕೊಂಡಿದ್ದಾರೆ.

ನಾನು ಯಾರ ಹೆಸರನ್ನೂ ಹೇಳಲ್ಲ, ಹೆಸರು ಹೇಳಿದರೆ ಅವರು ದೊಡ್ಡವರಾಗುತ್ತಾರೆ. ಅವರ ಹೆಸರು ಹೇಳಿ ನನ್ನ ವರ್ಚಸ್ಸು ಯಾಕೆ ಕಳೆದುಕೊಳ್ಳಲಿ ಎಂದು ಪ್ರತ್ಯೇಕ ಸಭೆ ನಡೆಸಿದ ಸಚಿವರ ಹೆಸರು ಹೇಳದೇ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

ಶಾಸಕ ಮಹೇಶ್ ಕುಮಟಳ್ಳಿ ಮಾತನಾಡಿ, ನಾನು ಪ್ರತಿ ದಿನ ಊಟ, ತಿಂಡಿ ಜಾರಕಿಹೊಳಿಯವರ ಮನೆಯಲ್ಲೇ ಮಾಡುತ್ತೇನೆ. ಇಂದಿನ ಭೇಟಿಯಲ್ಲಿ ಯಾವುದೇ ವಿಶೇಷತೆ ಇಲ್ಲ. ಅಥಣಿ ಕ್ಷೇತ್ರದ ನೀರಾವರಿ ವಿಚಾರಕ್ಕೆ ಇಂದು ಬಂದಿದ್ದೆ. ಸಚಿವ ಸ್ಥಾನಕ್ಕೆ ಯಾವುದೇ ಲಾಬಿ ಇಲ್ಲ. ಅವರ ಇಲಾಖೆಯ ಕೆಲಸಕ್ಕೆ ದೆಹಲಿಗೆ ಹೋಗಿದ್ದರು ಅಷ್ಟೇ. ನನಗೆ ಪಕ್ಷದವರು ಕೊಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಹುದ್ದೆಗಿಂತಲೂ ಪಕ್ಷ ಸಂಘಟನೆ ಮಹತ್ವವಾದದ್ದು. ಈಗ ನನಗೆ ಸ್ಲಂ ಬೋರ್ಡ್ ಕೊಟ್ಟಿದ್ದಾರೆ, ನಾನು ಸಂತೋಷವಾಗಿದ್ದೇನೆ ಎಂದರು.

ಆಸೆ, ಆಕಾಂಕ್ಷೆಗಳು ಬೇರೆ, ಜಾರಕಿಹೊಳಿಯವರು ಅವರ ಜೊತೆಗಿದ್ದವರಿಗೆ ನ್ಯಾಯ ಸಿಗಬೇಕು ಎಂದು ಮನವಿ ಮಾಡಿದ್ದಾರೆ. ನಮಗೆ ಅನ್ಯಾಯ ಎನ್ನುವಂತದಕ್ಕಿಂತ ಬಿಜೆಪಿ ವರಿಷ್ಠರು ಕೊಡುವ ಜವಾಬ್ದಾರಿಯನ್ನು ಹುಮ್ಮಸ್ಸಿನಿಂದ ನಿರ್ವಹಿಸುತ್ತೇನೆ. ಪಕ್ಷ ಸಂಘಟನೆಯಿಂದ ಹಿಡಿದು ಯಾವುದೇ ಕೆಲಸ ಕೊಟ್ಟರೂ ಮಾಡುತ್ತೇನೆ ಎಂದು ತಿಳಿಸಿದರು.

ಮೂರು ದಿನಗಳ ಕಾಲ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದ ಜಾರಕಿಹೊಳಿ ಇಂದು ಬೆಂಗಳೂರಿಗೆ ಮರಳಿದ್ದು, ಬೆಂಗಳೂರಿನ ನಿವಾಸಕ್ಕೆ ಆಗಮಿಸಿದ್ದಾರೆ.

Click to comment

Leave a Reply

Your email address will not be published. Required fields are marked *