Connect with us

Davanagere

ಕಾಂಗ್ರೆಸ್ಸಿಗರು ರೆಡಿಮೆಡ್ ಫುಡ್ ಇದ್ದಂತೆ: ರೇಣುಕಾಚಾರ್ಯ ಕಿಡಿ

Published

on

ದಾವಣಗೆರೆ: ಕಾಂಗ್ರೆಸ್ಸಿಗರಿಗೆ ಹೋರಾಟವೇ ಗೊತ್ತಿಲ್ಲ. ಅವರೆಲ್ಲ ರೆಡಿಮೆಡ್ ಫುಡ್ ಇದ್ದಂತೆ ಎಂದು ಶಾಸಕ ಎಂಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ತೈಲ ಬೆಲೆ ಏರಿಕೆ ವಿರೋಧಿಸಿ ಕೈ ನಾಯಕರು, ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಬಂಧ ದಾವಣಗೆರೆಯ ನ್ಯಾಮತಿ ತಾಲೂಕಿನಲ್ಲಿ ಸುರಹೊನ್ನೆಯಲ್ಲಿ ಶಾಸಕರು, ಕಾಂಗ್ರೆಸ್ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ಕಾಂಗ್ರೆಸ್ಸಿಗರು ಯಾವುದೇ ಅನುಮತಿ ನೀಡದೆ ಪ್ರತಿಭಟನೆ ಮಾಡುತ್ತಾ ಇದ್ದಾರೆ. ಕೊರೊನಾ ಸಂದರ್ಭದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಿ. ಪ್ರಧಾನಿಗಳಿಗೆ ಮನವಿ ಮಾಡಿಕೊಳ್ಳಲಿ. ಆದರೆ ಇಲ್ಲಿ ಅವರು ನಿಯಮಗಳನ್ನು ಗಾಳಿಗೆ ತೂರಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಗರಂ ಆದರು.

ನಿನ್ನೆ ಸಾವಿರಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಗಳು ಬಂದಿದೆ. ದಿನೇದಿನೇ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುವುದರಲ್ಲೇ ಇದೆ. ಅಂತಹ ಸಂದರ್ಭದಲ್ಲಿ ಸಾವಿರಾರು ಜನ ಸೇರಿ ಪ್ರತಿಭಟನೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ ಶಾಸಕರು, ಪ್ರತಿಪಕ್ಷಗಳ ಸಭೆ ಕರೆದರೂ ಬಾರದೇ ನಿರ್ಲಕ್ಷ್ಯ ತೋರಿದ್ದಾರೆ. ಕೊರೊನಾ ಜಾಗೃತಿ ಮೂಡಿಸುವ ಕೆಲಸ ಮಾಡುವ ಬದಲು ಈ ರೀತಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಹೋರಾಟವೇ ಗೊತ್ತಿಲ್ಲ. ಅವರೆಲ್ಲ ರೆಡಿ ಫುಡ್ ಇದ್ದಂತೆ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬರುವವರು. ಅವರ ವಿರುದ್ಧದ ಕಾನೂನಿನ ಕ್ರಮದ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.

ಸಿಎಂ ಬಿಎಸ್‍ವೈ ಕಾರ್ಯಕ್ಕೆ ಪ್ರತಿಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ನಾಯಕರೇ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ. ಕೊರೊನಾ ವಿಷಯದಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ. ಪ್ರತಿಪಕ್ಷಗಳು ಸಭೆಯಲ್ಲಿ ಸಲಹೆ ಸೂಚನೆ ಕೊಡೋ ಬದಲು ಹೊರಗೆ ಟೀಕೆ ಮಾಡೋದು ಸರಿಯಲ್ಲ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ, ಇದನ್ನ ಜನರು ಅರ್ಥ ಮಾಡಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ನೋಟ್ ಪ್ರೀಂಟ್ ಒತ್ತುತ್ತಾ..?, ನಾಳೆ ಖಜಾನೆ ಖಾಲಿಯಾದಾಗ ಸಿದ್ದರಾಮಯ್ಯನವರೇ ಶ್ವೇತ ಪತ್ರ ಹೊರಡಿಸಿ ಅಂತಾರೆ. ಶ್ವೇತ ಪತ್ರ ಹೊರಡಿಸೋದು ಹುಡುಗಾಟಿಕೇನಾ ಎಂದು ಶಾಸಕರು ಪ್ರಶ್ನೆಗಳ ಸುರಿಮಳೆಗೈದ್ರು.

ಇದೇ ವೇಳೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬಗ್ಗೆ ಮಾತನಾಡಿದ ಅವರು, 10ನೇ ತರಗತಿ ಅನ್ನೋದು ವಿದ್ಯಾರ್ಥಿಗಳಿಗೆ ಪ್ರತಿಭೆ ಘಟ್ಟ. ಹಾಗೆ ಪಾಸ್ ಮಾಡಿದ್ರೆ ಸರಿ ಹೋಗಲ್ಲ. ಆರೋಗ್ಯನೂ ಮುಖ್ಯ ಅದರ ಜೊತೆಗೆ ಅವರ ಬದುಕು ಕೂಡ ಮುಖ್ಯ. ಆದ್ದರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನ ಅನಿವಾರ್ಯವಾಗಿ ಮಾಡ್ತಾ ಇದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸರ್ಕಾರಕ್ಕೆ ಪ್ರತಿಷ್ಠೆ ಅಲ್ಲ. ಮಕ್ಕಳ ಹಿತ ದೃಷ್ಟಿಯಿಂದ ಮಾಡಿದ್ದೀವಿ ಎಂದರು.