Districts
ರಾಜ್ಯದ ಸಂಸದರು ಚಾಂದಿನಿ ಚೌಕ್ಗೆ ಹೋಗಿ ಚಾಟ್ಸ್ ತಿನ್ನಲು ಮಾತ್ರ ಯೋಗ್ಯರು: ಪ್ರಿಯಾಂಕ್ ಖರ್ಗೆ

ಕಲಬುರಗಿ: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ತರಲು ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಂಪಿಗಳು ಚಾಂದಿನಿ ಚೌಕ್ಗೆ ಹೋಗಿ ಚಾಟ್ಸ್ ತಿನ್ನಲು ಮಾತ್ರ ಯೋಗ್ಯರು. ಮೋದಿ ಬಳಿ ಹೋಗಿ ಅನುದಾನ ಕೇಳುವ ಧೈರ್ಯ ನಮ್ಮ ಎಂಪಿಗಳಿಗಿಲ್ಲ. ಮೇಲಿನವರು ಹೇಳಿದ ಹಾಗೆ ಕೈಕಟ್ಟಿ ಕೇಳಿ ಬರ್ತಾರೆ ಎಂದು ಕಿಡಿಕಾರಿದ್ದಾರೆ.
ಇದಕ್ಕೆನಾ ಅವರನ್ನು ರಾಜ್ಯದ ಜನರು ಆಯ್ಕೆ ಮಾಡಿ ಕಳಿಸಿದ್ದು?, ಬಿಜೆಪಿಯವರು ರಾಜ್ಯದ ಜನರ ಜೊತೆ ಚೆಲ್ಲಾಟ ಆಡೋದು ನಿಲ್ಲಿಸಬೇಕು. ಜನರ ಕೈಯಲ್ಲಿ ದುಡ್ಡಿಲ್ಲ ಜನ ಪರದಾಡ್ತಾ ಇದ್ದಾರೆ. ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಬಿಜೆಪಿ ಒಡೆದ ಮನೆಯಾಗಿದೆ. ಕೆಲವರು ಮಂತ್ರಿ ಆಗಬೇಕು ಇನ್ನೂ ಕೆಲವರು ಮುಖ್ಯಮಂತ್ರಿ ಆಗಬೇಕು. ಅಂತಿದ್ರೆ ಬಿಎಸ್ವೈ ತಮ್ಮ ಕುರ್ಚಿ ಉಳಿಸಿಕೊಳ್ಳಲು ಬರೀ ಘೋಷಣೆಗಳನ್ನ ಮಾಡ್ತಿದ್ದಾರೆ. ಕಲ್ಯಾಣ ಕರ್ನಾಟಕ ಜನರನ್ನ ಲೆಕ್ಕಕ್ಕೇ ತಗೊಳ್ತಾ ಇಲ್ಲ ಎಂದು ಸಿಎಂ ವಿರುದ್ಧವೂ ಕೆಂಡಾಮಂಡಲರಾದರು.
ಒಂದು ದೇಶ ಒಂದು ಚುನಾವಣೆ ಅನ್ನೋ ಬಿಜೆಪಿ ಘೋಷವಾಕ್ಯಕ್ಕೆ ಪ್ರತಿಕ್ರಿಯಿಸಿ, ಒಂದು ಚುನಾವಣೆ ಸಾವಿರಾರು ಆಶ್ವಾಸನೆ. ಇದೇ ಈಗ ಬಿಜೆಪಿ ಘೋಷ ವಾಕ್ಯವಾಗಿದೆ ಎಂದು ಪ್ರಿಯಾಂಕ್ ಸಿಡಿಮಿಡಿಗೊಂಡಿದ್ದಾರೆ.
