Connect with us

Bellary

ಅನಾರೋಗ್ಯದ ನೆಪವೊಡ್ಡಿ ಸದನಕ್ಕೆ ಗೈರಾಗಲು ನಾಗೇಂದ್ರ ನಿರ್ಧಾರ

Published

on

 ಬಳ್ಳಾರಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರು ವಿಶ್ವಾಸ ಮತಯಾಚನೆ ವೇಳೆ ಸದನಕ್ಕೆ ಗೈರು ಹಾಜರಾಗಲು ನಿರ್ಧರಿಸಿದ್ದಾರೆ.

ಹೀಗಾಗಿ ದೋಸ್ತಿ ನಾಯಕರಿಗೆ ಮತ್ತೊಂದು ಬಿಗ್ ಶಾಕ್ ಕಾದಿದ್ದು, ಕಾಂಗ್ರೆಸ್‍ಗೆ ಕೈ ಕೊಡಲು ನಾಗೇಂದ್ರ ಅವರು ಸಜ್ಜಾಗಿದ್ದಾರಾ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಆರೋಗ್ಯದ ನೆಪವೊಡ್ಡಿ ಗೈರು ಹಾಜರಾಗಲು ನಾಗೇಂದ್ರ ನಿರ್ಧರಿಸಿದ್ದಾರೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

ಹೃದಯಾಘಾತದಿಂದ ನಾಗೇಂದ್ರ ಅವರು ಭಾನುವಾರ ಬೆಂಗಳೂರಿನ ಆಸ್ಟರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹೃದಯಾಘಾತದ ನಂತರ ವೈದ್ಯರು ನಾಗೇಂದ್ರ ಅವರಿಗೆ ಸ್ಟಂಟ್ ಅಳವಡಿಸಿದ್ದು, ವೈದ್ಯರ ಸೂಚನೆ ಮೇರೆಗೆ ರೆಸ್ಟ್ ತಗೆದುಕೊಂಡು ಸದನಕ್ಕೆ ಗೈರು ಹಾಜರಾಗಲು ನಾಗೇಂದ್ರ ಅವರು ನಿರ್ಧರಿಸಿದ್ದಾರೆ.

ಭಾನುವಾರವಷ್ಟೇ ನಾಗೇಂದ್ರರನ್ನ ಕೈ ನಾಯಕರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ನಾಗೇಂದ್ರ ಗೈರು ಹಾಜರಿಯ ಮುನ್ಸೂಚನೆ ಅರಿತೇ ಕೈ ನಾಯಕರು ಭೇಟಿ ಮಾಡಿದ್ದರು ಎಂಬ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಈ ಹಿಂದೆ ಅತೃಪ್ತ ಶಾಸಕರ ಗುಂಪಿನಲ್ಲಿ ನಾಗೇಂದ್ರ ಅವರು ಕೂಡ ಸೇರಿದ್ದರು. ಆದರೆ ಮಾಜಿ ಸಿಎಂ ಸಿದ್ದರಾಮಯ್ಯರ ಮನವೊಲಿಕೆಯಿಂದ ರಾಜೀನಾಮೆ ನಿರ್ಧಾರದಿಂದ ಅವರು ಹಿಂದೆ ಸರಿದಿದ್ದರು ಎನ್ನಲಾಗಿದೆ.

ಆದರೆ ಆಂಧ್ರಪ್ರದೇಶ ಸರ್ಕಾರದ ಸಚಿವರಾಗಿರುವ ಸಹೋದರ ಜಯರಾಮ್‍ರಿಂದ ಮನವೋಲಿಸಿದ್ದರು. ಜೊತೆಗೆ ಸದನಕ್ಕೆ ಗೈರು ಹಾಜರಿ ಆಗಿ ಬಿಜೆಪಿಗೆ ಬೆಂಬಲಿಸುವಂತೆ ಬಿಎಸ್ ಯಡಿಯೂರಪ್ಪರಿಂದ ಕೂಡ ಮನವಿ ಬಂದಿತ್ತು. ಬಿಜೆಪಿಗೆ ಬೆಂಬಲಿಸುವಂತೆ ಮನವೊಲಿಕೆ ಮಾಡಿದ ಹಿನ್ನೆಲೆಯಲ್ಲಿ ಸದನಕ್ಕೆ ಗೈರಾಗುವ ನಿರ್ಧಾರಕ್ಕೆ ಬಂದು ಶಾಸಕ ನಾಗೇಂದ್ರ ಕಾಂಗ್ರೆಸ್ಸಿಗೆ ಉಲ್ಟಾ ಹೊಡೆಯುತ್ತಿದ್ದಾರಾ ಎಂಬ ಕುತೂಹಲ ಮೂಡಿದೆ.