Connect with us

Belgaum

ಗುರುಗಳು ಯಾರ ಕಪಿಮುಷ್ಟಿಯಲ್ಲಿಲ್ಲ, ಧರ್ಮದಲ್ಲಿ ರಾಜಕಾರಣ ಬೇಡ: ಲಕ್ಷ್ಮಿ ಹೆಬ್ಬಾಳ್ಕರ್

Published

on

ಬೆಂಗಳೂರು: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟದಲ್ಲಿ ಗುರುಗಳು ಯಾರ ಕಪಿಮುಷ್ಟಿಯಲ್ಲಿಲ್ಲ. ಧರ್ಮದಲ್ಲಿ ರಾಜಕಾರಣ ಮಾಡೋದು ಬೇಡ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಪಕ್ಷದ ಬಿ ಟೀಮ್ ಅಂತ ನಿರಾಣಿ ಅವರು ಹೇಳಿರೋದು ತಪ್ಪು. ಪಕ್ಷಾತೀತವಾಗಿ ಮೀಸಲಾತಿ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಿದ್ದು, ಸರ್ಕಾರಕ್ಕೆ ಮನವಿ ಸಲ್ಲಿಸುವ ಕೆಲಸ ಮಾಡಲಾಗ್ತಿದೆ. ನಿರಾಣಿ ಅವರು ಯಾಕೆ ಹೋರಾಟಕ್ಕೆ ಬೆಂಬಲ ಸೂಚಿಸಿದರು ಎಂದು ಪ್ರಶ್ನಿಸಿದರು. ಹೋರಾಟದ ಮುಂಚೂಣಿಯಲ್ಲಿದ್ದವರು ಈ ರೀತಿ ಆರೋಪ ಮಾಡೋದು ಅವರಿಗೆ ಶೋಭೆ ತರಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಸಮಾಜಕ್ಕಾಗಿ ಗುರುಗಳು ಈ ಹೋರಾಟ ಮಾಡುತ್ತಿದ್ದು, ಸ್ವಾರ್ಥಕ್ಕಲ್ಲ. ಗುರುಗಳು ಯಾರ ಕಪಿಮುಷ್ಟಿಯಲ್ಲಿಯೂ ಇಲ್ಲ. ವೀರಶೈವ ಲಿಂಗಾಯತದಲ್ಲಿ ಸುಮಾರು ನೂರು ಒಳ ಪಂಗಡಗಳಿವೆ. ಅದರಲ್ಲಿ 32 ಒಳ ಪಂಗಡಗಳಿಗೆ 2ಎ ಮಾನ್ಯತೆ ಸಿಕ್ಕಿದ್ದು, ಇನ್ನುಳಿದವರಿಗಾಗಿ ಈ ಹೋರಾಟ ನಡೆಸಲಾಗ್ತಿದೆ. ಈ ವಿಷಯವನ್ನ ಬಿಜೆಪಿಗರು ರಾಜಕೀಯವಾಗಿ ಬಳಸಿಕೊಳ್ಳಬಾರದು. ಧರ್ಮದಲ್ಲಿ ರಾಜಕಾರಣ ಒಳ್ಳೆಯದಲ್ಲ ಎಂದು ಹೇಳಿದರು.

ನಮ್ಮಲ್ಲಿ ಒಗ್ಗಟ್ಟಿದ್ದು, ವಿಚಾರಧಾರೆಗಳು ಭಿನ್ನವಾಗಿವೆ. ಸಚಿವರು ಸರ್ಕಾರದೊಳಗಿದ್ದಾರೆ. ಅವರಿಗೆ ಅನೇಕ ಒತ್ತಡ ಇರಬಹುದು. ಸರ್ಕಾರದ ಹೊರಗೆ ಇದ್ದು ಮಾತಾಡೋದು ಬೇರೆಯಾಗಿರುತ್ತೆ. ಸರ್ಕಾರವನ್ನ ಪ್ರತಿನಿಧಿಸುತ್ತಿರುವುದರಿಂದ ಅವರ ಧ್ವನಿ ಕಡಿಮೆಯಾಗಿದೆ. ಯಾರ ಒತ್ತಡ ಇದೆ ಗೊತ್ತಿಲ್ಲ ನಿರಾಣಿಯವರನ್ನೇ ಕೇಳಿದ್ರೇ ಗೊತ್ತಾಗುತ್ತೆ ಎಂದು ಪ್ರಶ್ನಿಸಿದರು.

Click to comment

Leave a Reply

Your email address will not be published. Required fields are marked *