Sunday, 19th May 2019

100 ರೂ. ದಂಡ ಕಟ್ಟಿ ಬಿಡುಗಡೆಯಾದ ಶಾಸಕ ಗೂಳಿಹಟ್ಟಿ ಶೇಖರ್

ಬೆಂಗಳೂರು: ಚೆಕ್ ಬೌನ್ಸ್ ಆರೋಪ ಎದುರಿಸುತ್ತಿದ್ದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪೊಲೀಸರ ವಶಕ್ಕೆ ನೀಡಿ, ಬಳಿಕ ಬಿಡುಗಡೆ ಮಾಡಿದೆ.

ಜಾಮೀನು ರಹಿತ ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಶಾಸಕರನ್ನು ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಸೂಚನೆ ನೀಡಿದರು. ತಕ್ಷಣವೇ ಪೊಲೀಸರು ಶಾಸಕ ಗೂಳಿಹಟ್ಟಿ ಶೇಖರ್ ಅವರನ್ನು ವಶಕ್ಕೆ ಪಡೆದರು.

ಶಾಸಕ ಗೂಳಿಹಟ್ಟಿ ಶೇಖರ್ ಅವರನ್ನು ವಿಚಾರಣೆ ನಡೆಸಿದ ಕೋರ್ಟ್, ಗೈರು ಹಾಜರಾತಿಗೆ 100 ರೂ. ದಂಡ ವಿಧಿಸಿ ಬಿಡುಗಡೆ ಮಾಡಿತು. ಅಷ್ಟೇ ಅಲ್ಲದೆ ಮತ್ತೆ ವಿಚಾರಣೆಗೆ ಗೈರಾದರೆ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದೆ.

ಏನಿದು ಪ್ರಕರಣ?:
ಶಾಸಕ ಗೂಳಿಹಟ್ಟಿ ಶೇಖರ್ ಅವರ ಮೇಲೆ ಮಹಾಲಕ್ಷ್ಮಿ ಲೇಔಟ್ ಜನತಾ ಕೋ-ಆಪರೇಟಿವ್ ಸೊಸೈಟಿಯು 1.25 ಕೋಟಿ ರೂ. ಚೆಕ್ ಬೌನ್ಸ್ ದೂರು ದಾಖಲಿಸಿತ್ತು. ಈ ಕುರಿತು ಜನತಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ ಶಾಸಕರು ಮಾತ್ರ ವಿಚಾರಣೆಗೆ ಹಾಜರಾಗದೇ ಗೈರಾಗುತ್ತಿದ್ದರು. ಇದರಿಂದಾಗಿ ಕೋರ್ಟ್ ಶಾಸಕ ಗೂಳಿಹಳ್ಳಿ ಶೇಖರ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಶಾಸಕರು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *