Wednesday, 26th February 2020

Recent News

ನೀವು ಯಾರ ಕುಮ್ಮಕ್ಕಿನಿಂದ ಬಂದ ನಾಯಿಗಳು- ಹಿರೇಮಠ್‍ಗೆ ಶಾಸಕ ಮಂಜುನಾಥ್ ಪ್ರಶ್ನೆ

– ಜಾಗ ಒತ್ತುವರಿಯಾಗಿದ್ದರೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿ
– ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಗಲಾಟೆ ಮಾಡುವುದೇಕೆ?

ರಾಮನಗರ: ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಅವರನ್ನೊಳಗೊಂಡ ತಂಡ ಕೇತಗಾನಹಳ್ಳಿಗೆ ಬಂದು ಪ್ರಕ್ಷುಬ್ದ ವಾತಾವರಣ ನಿರ್ಮಿಸಿದೆ ಎಂದು ಶಾಸಕ ಎ.ಮಂಜುನಾಥ್ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಲೀಕತ್ವದ ಆಸ್ತಿ ಬಗ್ಗೆ ಹಿರೇಮಠ ಅಲ್ಲದೆ, ಹಲವರು ತನಿಖೆ ನಡೆಸಿದ್ದಾರೆ. ಪ್ರಪಂಚದಲ್ಲಿ ನಡೆಯದ್ದು ಕೇತಗಾನಹಳ್ಳಿಯಲ್ಲಿ ನಡೆದಿದೆ ಎಂಬ ಚರ್ಚೆ, ತನಿಖೆಗಳು ನಡೆದಿವೆ. ಈ ಮೂಲಕ ಗ್ರಾಮಸ್ಥರಲ್ಲೇ ತಂದಿಕ್ಕುವ ಕೆಲಸ ಮಾಡಿದ್ದು, ಗುಂಪುಗಳಾಗಿ ಒಡೆದಿದ್ದಾರೆ. ಏಕೆ ಕೇತಗಾನಹಳ್ಳಿಗೆ ಬಂದಿರಿ, ಕೋರ್ಟ್ ಹೇಳಿತ್ತಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಎಚ್‍ಡಿಕೆ, ಡಿ.ಸಿ.ತಮ್ಮಣ್ಣಗೆ ಮಾನ ಮರ್ಯಾದೆ ಇದ್ದರೆ ಭೂಕಬಳಿಕೆ ಜಾಗವನ್ನ ಮರಳಿಸಲಿ: ಹಿರೇಮಠ್

ಬೀದಿ ನಾಯಿ, ಸಾಕು ನಾಯಿ ಅಂತೀರಲ್ಲ ನೀವು ಯಾರ ಕುಮ್ಮಕ್ಕಿನಿಂದ ಬಂದ ನಾಯಿಗಳು, ನಿಮಗಿಂತ ಮಾತನಾಡಲು ನಮಗೂ ಬರುತ್ತೆ. ಬೇರೆ ಊರಿನಿಂದ ಬಂದ ನೀವೇ ದೊಣ್ಣೆ ಹಿಡಿದು ನಿಂತಿದ್ದಿರಿ. ಹೀಗಿರುವಾಗ ಗ್ರಾಮಸ್ಥರು ಸುಮ್ಮನಿರಬೇಕಾ, ಕನಿಷ್ಟ ಊರಿನ ಹಿರಿಯರನ್ನೂ ಕೇಳದೆ ಊರಿಗೆ ನುಗ್ಗಿದ್ದೀರಿ ಎಂದು ಎಸ್.ಆರ್.ಹಿರೇಮಠ ಹಾಗೂ ರವಿಕೃಷ್ಣಾರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.  ಇದನ್ನೂ ಓದಿ: ಬಿಡದಿಯಲ್ಲಿ ಎಸ್.ಆರ್ ಹಿರೇಮಠ್, ರವಿಕೃಷ್ಣಾ ರೆಡ್ಡಿ ಮೇಲೆ ಮೊಟ್ಟೆ ಏಟು

ಒತ್ತುವರಿಯಾಗಿದೆ, ಅವ್ಯವಹಾರವಾಗಿದೆ ಎಂದರೆ ಕೇಳಲು ಕೋರ್ಟ್ ಗಳಿವೆ. ನೀವು ಯಾಕೆ ಇಲ್ಲಿಗೆ ಬಂದಿರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಡಾಕ್ಯುಮೆಂಟ್ ಆಗಬೇಕು, ಪ್ರಚಾರ ಪಡೆಯಬೇಕು ಸುದ್ದಿಯಾಗಬೇಕೆಂದು ಇಲ್ಲಿಗೆ ಬಂದಿದ್ದೀರಿ. ಸುಖಾ ಸುಮ್ಮನೆ ನಮ್ಮ ಕಾರ್ಯಕರ್ತರ ಮೇಲೆ ಗೂಬೆ ಕೂರಿಸುತ್ತಿದ್ದೀರಿ, ನಮ್ಮ ಕಾರ್ಯಕರ್ತರ ಮೇಲೆ ಆರೋಪ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.

ಎಚ್‍ಡಿಕೆ ಬಳಿ 46.27 ಎಕರೆ ಜಾಗವಿದೆ, ಸರಿಯಾಗಿ ಅಳತೆ ಮಾಡಿದರೆ, ಇನ್ನೂ ಎರಡು ಎಕರೆ ಸರ್ಕಾರ ನೀಡಬೇಕು. ಜಿ.ಮಾದೇಗೌಡರ ಹೋರಾಟದಿಂದ ನಾಲ್ಕುವರೆ ಎಕರೆ ಹೆಚ್ಚುವರಿ ಇದ್ದದ್ದನ್ನು ಬಿಟ್ಟಿದ್ದಾರೆ. ಅದನ್ನು ಬಿಡದಿ ಸ್ಮಶಾನಕ್ಕೆ ನೀಡಿದ್ದೇವೆ. 4.5 ಎಕರೆ ಜಾಗವನ್ನು ಬಿಟ್ಟುಕೊಡಲು ಆದೇಶ ಮಾಡಲಾಗಿದೆ, ಡಿ.ಸಿ.ತಮ್ಮಣ್ಣ ಅವರು ಬಿಟ್ಟು ಕೊಟ್ಟಿದ್ದಾರೆ. ಒಂದು ವೇಳೆ ಒತ್ತುವರಿಯಾಗಿದ್ದರೆ, ಕಂದಾಯ ಇಲಾಖೆಯವರನ್ನು ಯಾಕೆ ಮರಳಿ ನೀಡಿಲ್ಲ ಎಂದು ಕೇಳಿ ಎಂದು ಕಿಡಿಕಾರಿದರು.

ಸರ್ಕಾರಿ ಜಾಗ, ಗೋಮಾಳ ಇದ್ದರೆ ಬಿಟ್ಟುಕೊಡಲು ಕುಮಾರಸ್ವಾಮಿ ಸಿದ್ಧರಿದ್ದಾರೆ. ಡಿ.ಸಿ.ತಮ್ಮಣ್ಣ ಅವರು 200 ಎಕರೆ ಸರ್ಕಾರಿ ಗೋಮಾಳ ಒತ್ತುವರಿ ಮಾಡಿದ್ದಾರೆ ಎಂದು ಹೇಳುತ್ತಾರೆ. ಬೆಂಗಳೂರಿಗೆ ಹತ್ತಿರವಿರುವ ಜಾಗದಲ್ಲಿ ಒತ್ತುವರಿ ಮಾಡಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಗಲಾಟೆ ಮಾಡುವ ಉದ್ದೇಶದಿಂದಲೇ ಅವರು ಗ್ರಾಮಕ್ಕೆ ಬಂದಿದ್ದಾರೆ. ಎಚ್‍ಡಿಕೆ ಒತ್ತುವರಿ ಮಾಡಿದ್ದಾರೆ ಎಂದು ಹೇಳುವಂತೆ ಬಲವಂತವಾಗಿ ಕೇಳಿದ್ದಾರೆ, ಮೊಬೈಲ್ ಮೂಲಕ ರೆಕಾರ್ಡ್ ಮಾಡಿಕೊಂಡಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳನ್ನು ಎಚ್ಡಿಕೆ ಮನೆಗೆ ಕರೆದುಕೊಂಡು ಇಟ್ಕೊಂಡಿದ್ದಾರಾ, ಅಧಿಕಾರಿಗಳು ಬಂದು ಪರಿಶೀಲನೆ ನಡೆಸಲಿ, ಸರ್ಕಾರಿ ಖರಾಬು, ಗೋಮಾಳ ಇದೆ ಎಂದು ಸಾಬೀತಾದರೆ ಬಿಡಲು ಸಿದ್ಧರಿದ್ದಾರೆ ಎಂದರು.

Leave a Reply

Your email address will not be published. Required fields are marked *