Sunday, 22nd September 2019

ಕೈಕಾಲು ಕಟ್ಟಿ, ಗೋಣಿ ಚೀಲದಲ್ಲಿ ಮಹಿಳೆಯ ಶವ ಪತ್ತೆ!

ಬೆಳಗಾವಿ: ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯೊಬ್ಬರ ಮೃತದೇಹವು ನೆರೆಯ ಮಹಾರಾಷ್ಟ್ರದ ನದಿಯಲ್ಲಿ ಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತಾಯವ್ವ ಶಿವಾಜಿ ಕದಮ(60) ಮೃತ ದುರ್ದೈವಿ. ಬೆಳಗಾವಿ ಸಮೀಪದ ಕೆ.ಕೆ ಕೊಪ್ಪ ಗ್ರಾಮದಿಂದ ಜನವರಿ 19ರಂದು ತಾಯವ್ವ ನಾಪತ್ತೆಯಾಗಿದ್ದರು. ನಾಪತ್ತೆಯಾಗಿದ್ದ ತಾಯವ್ವ ಮೃತದೇಹ ಮಹಾರಾಷ್ಟ್ರದ ನದಿಯಲ್ಲಿ ಪತ್ತೆಯಾಗಿದೆ.

ಕೊಲ್ಹಾಪೂರ ಜಿಲ್ಲೆಯ ಮುರಗುಡ ಪ್ರದೇಶದಲ್ಲಿರುವ ವೇದಗಂಗಾ ನದಿಯಲ್ಲಿ ಜ.24 ರಂದು ಗೋಣಿ ಚೀಲದಲ್ಲಿ ಕೈಕಾಲು ಕಟ್ಟಿದ್ದ ಸ್ಥಿತಿಯಲ್ಲಿ ತಾಯವ್ವ ಅವರ ಶವ ಪತ್ತೆಯಾಗಿತ್ತು. ಆದರೆ ಮಹಿಳೆಯ ಗುರುತು ಸ್ಥಳಿಯ ಪೊಲೀಸರಿಗೆ ಸಿಕ್ಕಿರಲಿಲ್ಲ. ಈ ವಿಚಾರವಾಗಿ ತನಿಖೆ ನಡೆಸಿದ ಬಳಿಕ ನೆರೆಯ ರಾಜ್ಯದಲ್ಲಿ ಪತ್ತೆಯಾದ ಮೃತದೇಹ ಕಾಣೆಯಾದ ತಾಯವ್ವ ಅವರದ್ದು ಎಂದು ತಿಳಿದುಬಂದಿದೆ.

ತಾಯವ್ವ ಜೀವನ ನಡೆಸಲು ತರಕಾರಿ ವ್ಯಾಪಾರ ಮಾಡಿಕೊಂಡು ಇದ್ದರು. ಹೀಗೆ ಜ. 16ರಂದು ಕೆಲಸದ ಹಿನ್ನೆಲೆ ತಾಯವ್ವ ಬೆಳಗಾವಿಗೆ ಹೋದವರು ಮನೆಗೆ ಹಿಂತಿರುಗಿರಲಿಲ್ಲ. ಈ ವಿಚಾರವಾಗಿ ತಾಯವ್ವ ಕಾಣೆಯಾಗಿದ್ದಾರೆ ಎಂದು ಮನೆಯವರು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರಿಂದ ಪೊಲೀಸರು ಮಹಿಳೆಯನ್ನು ಪತ್ತೆ ಮಾಡಲು ಹುಡುಕಾಟ ನಡೆಸಿದ್ದರು. ಈಗ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆ ಬಳಿ ಇದ್ದ ಹಣಕ್ಕಾಗಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *