Connect with us

Cinema

ಮಿಸ್ಸಿಂಗ್ ಬಾಯ್: ಕಂಟಕದಿಂದ ಪಾರುಮಾಡಿದ್ದು ಶಿವಣ್ಣನ ಪ್ರೀತಿ!

Published

on

ಬೆಂಗಳೂರು: ಸೂಕ್ಷ್ಮ ಕಥಾ ಹಂದರಗಳಿಗೆ ಪರಿಣಾಮಕಾರಿಯಾಗಿ ದೃಶ್ಯ ಕಟ್ಟುವಲ್ಲಿ ಮಾಸ್ಟರ್ ಅನ್ನಿಸಿಕೊಂಡಿರುವವರು ನಿರ್ದೇಶಕ ರಘುರಾಮ್. ಅವರು ಅಂಥಾದ್ದೇ ಶ್ರದ್ಧೆಯಿಂದ ರೂಪಿಸಿರುವ ಮಿಸ್ಸಿಂಗ್ ಬಾಯ್ ಚಿತ್ರ ಇದೇ ತಿಂಗಳ 22ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಅವರು ಅದೆಷ್ಟೇ ಪ್ರೀತಿಯಿಂದ ಮಿಸ್ಸಿಂಗ್ ಬಾಯ್ ಚಿತ್ರವನ್ನು ರೂಪಿಸಿದ್ದರೂ ಬಿಡುಗಡೆಯ ವಿಚಾರದಲ್ಲಿ ಗ್ರಹಣ ಕವಿದುಕೊಂಡಿತ್ತು. ಹೀಗೇ ಮುಂದುವರಿದಿದ್ದರೆ ಅದೇನೇನಾಗುತ್ತಿತ್ತೋ ಗೊತ್ತಿಲ್ಲ. ಆದ್ರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಕಾಲಕ್ಕೆ ಎಂಟ್ರಿ ಕೊಟ್ಟು ಕವಿದಿದ್ದ ಗ್ರಹಣ ಕಳೆಯುವಂತೆ ಮಾಡಿದ್ದಾರೆ. ಈವತ್ತಿಗೆ ರಘುರಾಮ್ ಮುಖದಲ್ಲಿ ಖುಷಿ ಇದೆಯೆಂದರೆ ಅದಕ್ಕೆ ಶಿವಣ್ಣನ ಅಕಾರಣ ಕಾಳಜಿಯೇ ಕಾರಣ!

ನಿರ್ಮಾಪಕರ ಕಡೆಯಿಂದ ಎರಡು ವರ್ಷಗಳ ಕಾಲ ಮಿಸ್ಸಿಂಗ್ ಬಾಯ್ ಬಿಡುಗಡೆ ಡಿಲೇ ಆಗುತ್ತಿರುವ ವಿಚಾರ ತಿಳಿದ ಶಿವರಾಜ್ ಕುಮಾರ್ ಅವರು ಈ ಬಗ್ಗೆ ಮುತುವರ್ಜಿ ವಹಿಸಿ ಸಹೋದರ ಪುನೀತ್ ಗೆ ಹೇಳಿದ್ದರಂತೆ. ಪುನೀತ್ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಕುಮಾರ್ ಅವರ ಬಳಿ ಚರ್ಚಿಸಿ ಹೊಂಬಾಳೆ ಫಿಲಂಸ್ ನ ಕಾರ್ತಿಕ್ ಗೌಡರ ಕಡೆಯಿಂದ ಈ ಚಿತ್ರ ಬಿಡುಗಡೆಯಾಗುವಂತೆ ನೋಡಿಕೊಂಡಿದ್ದಾರೆ.

ಮಿಸ್ಸಿಂಗ್ ಬಾಯ್ ಚಿತ್ರ ಬಿಡುಗಡೆ ಮುಂದಕ್ಕೆ ಹೋಗುತ್ತಾ ಬಂದಿದ್ದಕ್ಕೆ ಕಾರಣ ನಿರ್ಮಾಪಕರ ಆರ್ಥಿಕ ಬಾಧೆ. ಅದೆಷ್ಟೋ ಕಾಲದಿಂದ ತಡೆದುಕೊಂಡು ಕಾದಿದ್ದ ರಘುರಾಮ್ ಪಾಲಿಗೆ ಕಡೆಗೆ ಯಾವ ಭರವಸೆಯೂ ಉಳಿದಿರಲಿಲ್ಲ. ಪ್ರೀತಿಯಿಂದ ಮಾಡಿದ ಚಿತ್ರ ಉಸಿರು ನಿಲ್ಲುತ್ತದೆ ಎಂಬ ಆಘಾತದಲ್ಲಿದ್ದರು. ಆದರೆ ಈ ವಿಚಾರವನ್ನು ಹೇಗೋ ತಿಳಿದುಕೊಂಡಿದ್ದ ಶಿವಣ್ಣ ಮಿಸ್ಸಿಂಗ್ ಬಾಯ್ ಗೆ ಬಿಡುಗಡೆಯ ಭಾಗ್ಯ ಕರುಣಿಸಿದ್ದಾರೆ. ಆ ಬಲದಿಂದಲೇ ಈ ಚಿತ್ರವೀಗ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳುತ್ತಿದೆ.