Crime
ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನಿಗೆ ಗುಂಡೇಟು

– ತಂದೆ ಜೊತೆ ಸೇರಿ ಮಗನ ರೌಡಿಸಂ
– ನಡುರಸ್ತೆಯಲ್ಲಿ ಹೆಣವಾದ 27ರ ಚಾಲಕ
ಭೋಪಾಲ್: ತಂದೆ- ಮಗ ಸೇರಿ ಆಟೋ ಚಾಲಕನನ್ನ ಕೊಲೆಗೈದಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ಇಂದು ಬೆಳಗ್ಗೆ ನಡೆದಿದೆ.
ಭಾವನ ನಗರದ ಖಂಡ್ವಾ ನಿವಾಸಿ ಲೋಕೇಶ್ ಸಾಲ್ವೆ (27) ಮೃತ ಚಾಲಕ. ಖಂಡ್ವಾ ರಸ್ತೆ ಬಳಿ ಲೋಕೇಶ್ ಆಟೋ ಆರೋಪಿಗಳ ಕಾರ್ ಗೆ ಡಿಕ್ಕಿ ಹೊಡೆದಿತ್ತು. ಕಾರಿನಲ್ಲಿದ್ದ ತಂದೆ-ಮಗ ಲೋಕೇಶ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಈ ವೇಳೆ ಕೋಪಗೊಂಡ ಯುವಕ ಕಾರ್ ನಲ್ಲಿರಿಸಿದ್ದ ಗನ್ ತಂದು ಲೋಕೇಶ್ ಹಣೆಗೆ ಗುಂಡು ಹೊಡೆದು ತಂದೆಯೊಂದಿಗೆ ಎಸ್ಕೇಪ್ ಆಗಿದ್ದಾನೆ. ಸ್ಥಳೀಯರು ಲೋಕೇಶ್ ನನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಮಾರ್ಗ ಮಧ್ಯೆಯೇ ಚಾಲಕ ಮೃತಪಟ್ಟಿರೋದನ್ನ ದೃಢಪಡಿಸಿದ್ದಾರೆ.
ಘಟನೆ ಬಳಿಕ ಸ್ಥಳೀಯರು ಲೋಕೇಶ್ ಸೋದರ ದೀಪಕ್ ಮತ್ತು ಪೊಲೀಸರಿಗೂ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳೀಯರು ನೀಡಿದ ಕಾರ್ ನಂಬರ್ ಆಧಾರದ ಮೇಲೆ ಪರಾರಿಯಾಗಿದ್ದ ತಂದೆ-ಮಗನನ್ನ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.
ಸದ್ಯ ಇಬ್ಬರನ್ನ ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಘಟನೆಯಿಂದ ಇಡೀ ಇಂದೋರ್ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
