Connect with us

Latest

ಮಾರ್ಚ್‌ ಮಧ್ಯದಲ್ಲಿ ತೈಲ ಬೆಲೆ ಇಳಿಕೆ ಸಾಧ್ಯತೆ

Published

on

ನವದೆಹಲಿ: ತೈಲ ಬೆಲೆ ದಿನೇ ದಿನೇ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಹಣಕಾಸು ಸಚಿವಾಲಯವು ಚಿಂತನೆ ನಡೆಸಿದ್ದು, ಮಾರ್ಚ್‌ ಮಧ್ಯದಲ್ಲಿ ಬೆಲೆ ಇಳಿಕೆಯ ಸಿಹಿ ಸುದ್ದಿ ಸಿಗಬಹುದು ಎಂದು ವರದಿಯಾಗಿದೆ.

ತೈಲ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಏರತೊಡಗಿದೆ. ಹೀಗಾಗಿ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಮೂವರು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಗ್ರಾಹಕ ದೇಶವಾಗಿರುವ ಭಾರತದಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲೆ ಶೇ.60 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಕಳೆದ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ತೈಲ ಬೆಲೆ ವಿಶ್ವಾದ್ಯಂತ ಇಳಿಕೆಯಾಗಿತ್ತು. ಆದರೆ ಭಾರತದಲ್ಲಿ ಅಬಕಾರಿ ಸುಂಕ ಹೆಚ್ಚಳ ಮಾಡಿದ್ದರಿಂದ ಬೆಲೆ ಇಳಿಕೆಯ ಲಾಭ ಗ್ರಾಹಕರಿಗೆ ಸಿಕ್ಕಿರಲಿಲ್ಲ. ಇದನ್ನೂ ಓದಿ: ನಾಗಾಲ್ಯಾಂಡ್‌ನಲ್ಲಿ ತೈಲದ ಮೇಲಿನ ತೆರಿಗೆ ಕಡಿತ – ಯಾವ ರಾಜ್ಯಗಳಲ್ಲಿ ಎಷ್ಟು ರೂ. ಇಳಿಕೆಯಾಗಿದೆ?

ಈಗ ಒಪೆಕ್‌ ರಾಷ್ಟ್ರಗಳು ತೈಲ ಉತ್ಪಾದನೆ ಕಡಿತ ಮಾಡಿರುವ ಕಾರಣ ಬೇಡಿಕೆ ಹೆಚ್ಚಾಗಿದ್ದರೂ ಪೊರೈಕೆ ಕಡಿಮೆಯಾಗಿದೆ. ಈ ಕಾರಣದಿಂದ ತೈಲಗಳ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಆಗುತ್ತಿದೆ. ದೇಶದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಈಗ ಬೆಲೆ ಇಳಿಕೆ ಮಾಡುವ ನಿಟ್ಟಿನಲ್ಲಿ ಕೆಲವು ರಾಜ್ಯಗಳು, ತೈಲ ಕಂಪನಿಗಳು ಮತ್ತು ತೈಲ ಸಚಿವಾಲಯದೊಂದಿಗೆ ಸಮಾಲೋಚನೆ ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ತೈಲ ಬೆಲೆಗಳನ್ನು ಸ್ಥಿರವಾಗಿ ಇರಿಸಬಹುದಾದ ಮಾರ್ಗಗಳನ್ನು ನಾವು ಚರ್ಚಿಸುತ್ತಿದ್ದೇವೆ. ಮಾರ್ಚ್ ಮಧ್ಯದ ವೇಳೆಗೆ ಈ ಸಮಸ್ಯೆಯನ್ನು ಪರಿಹಾರವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ತೆರಿಗೆಗಳನ್ನು ಕಡಿತಗೊಳಿಸುವ ಮೊದಲು ತೈಲ ಬೆಲೆಗಳು ಸ್ಥಿರವಾಗಬೇಕು ಎಂದು ಸರ್ಕಾರ ಬಯಸಿದೆ. ಯಾಕೆಂದರೆ ಒಂದು ಬಾರಿ ಕಡಿತ ಮಾಡಿದ ಬಳಿಕ ಮತ್ತೆ ತೈಲ ಬೆಲೆ ಹೆಚ್ಚಾದರೆ ಮತ್ತೆ ತೆರಿಗೆ ಏರಿಕೆ ಮಾಡಲು ಸಾಧ್ಯವಿಲ್ಲ.

ತೈಲ ಉತ್ಪಾದನೆ ಮಾಡುತ್ತಿರುವ ದೇಶಗಳ ಸಂಘಟನೆಯಾದ ಓಪೆಕ್‌ ಸಭೆ ಮಾರ್ಚ್‌ 4 ರಂದು ನಡೆಯಲಿದೆ. ಈ ವೇಳೆ ತೈಲ ಉತ್ಪಾದನೆ ಕುರಿತಂತೆ ಮಹತ್ವದ ನಿರ್ಧಾರ ಪ್ರಕಟವಾಗಲಿದೆ. ಒಪೆಕ್‌ ರಾಷ್ಟ್ರಗಳು ತೆಗೆದುಕೊಳ್ಳುವ ನಿರ್ಧಾರದ ಆಧಾರದ ಮೇಲೆ ಸರ್ಕಾರ ತೆರಿಗೆ ಕಡಿತ ಮಾಡುವ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆಯಿದೆ.

ಸರ್ಕಾರ ಮತ್ತು ರಾಜ್ಯಗಳು ಒಟ್ಟಾಗಿ ಸರ್ಕಾರದ ಅಂಕಿಅಂಶಗಳ ಪ್ರಕಾರ 2020 ರ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಪೆಟ್ರೋಲಿಯಂ ವಲಯದಿಂದ ಸುಮಾರು 5.56 ಟ್ರಿಲಿಯನ್ ರೂ. ಆದಾಯವನ್ನು ಸಂಗ್ರಹಿಸಿವೆ.

ಈ ಹಣಕಾಸು ವರ್ಷದ ಒಂಬತ್ತು ತಿಂಗಳು (ಏಪ್ರಿಲ್-ಡಿಸೆಂಬರ್ 2020) ಇಂಧನ ಬೇಡಿಕೆಯಲ್ಲಿ ಗಮನಾರ್ಹ ಕುಸಿತದ ಹೊರತಾಗಿಯೂ, ಸುಮಾರು 4.21 ಟ್ರಿಲಿಯನ್ ರೂ. ಆದಾಯ ಪೆಟ್ರೋಲಿಯಂ ವಲಯದಿಂದ ಸರ್ಕಾರಕ್ಕೆ ಬಂದಿದೆ.

ಕೃಷಿ ಕಾಯ್ದೆ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಈಗ ತೈಲ ಬೆಲೆ ಏರಿಕೆ ವಿಚಾರದಲ್ಲೂ ಪ್ರತಿಭಟನೆ ಜೋರಾಗಿದೆ. ಈ ನಡುವೆ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಒಂದು ವೇಳೆ ಸರ್ಕಾರ ತೈಲದ ಮೇಲಿನ ತೆರಿಗೆ ಇಳಿಕೆ ಮಾಡದೇ ಇದ್ದರೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಹಿನ್ನಡೆಯಾಗುವ ಸಾಧ್ಯತೆಯಿದೆ.

ಬೆಲೆ ಏರಿಕೆ ಯಾಕೆ?
ಕೋವಿಡ್ 19 ಹಿನ್ನೆಲೆಯಲ್ಲಿ ಕಚ್ಚಾ ತೈಲ ರಫ್ತು ದೇಶಗಳ ಸಂಘಟನೆ(ಒಪೆಕ್) ರಾಷ್ಟ್ರಗಳು 2020ರಲ್ಲಿ ತೈಲ ಉತ್ಪಾದನೆಯನ್ನು ಕಡಿತಗೊಳಿಸಿತ್ತು. ಈಗ ವಿಶ್ವದ ಆರ್ಥಿಕತೆ ಮರಳುತ್ತಿದ್ದು ತೈಲ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಒಪೆಕ್ ರಾಷ್ಟ್ರಗಳು ಈ ಹಿಂದೆ ಮಾಡಿಕೊಂಡ ಮತುಕತೆಯಂತೆಯೇ ಉತ್ಪಾದನೆ ಮಾಡುತ್ತಿದೆ. ಆದರಲ್ಲೂ ವಿಶ್ವದಲ್ಲಿ ಅತಿ ಹೆಚ್ಚು ತೈಲ ಉತ್ಪಾದಿಸುತ್ತಿರುವ ಸೌದಿ ಅರೆಬಿಯಾ ಪ್ರತಿ ದಿನ 1 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿದೆ. ಉತ್ಪಾದನೆ ಕಡಿಮೆ ಇರುವ ಕಾರಣ ಪೂರೈಕೆಯೂ ಕಡಿಮೆ ಆಗುತ್ತಿದೆ. ಆದರೆ ವಿವಿಧ ದೇಶಗಳಿಂದ ತೈಲ ಬೇಡಿಕೆ ಹೆಚ್ಚಾಗುತ್ತಿದೆ. ಪರಿಣಾಮ ಬ್ರೆಂಟ್ ಕಚ್ಚಾ ತೈಲದ ದರ ಏರಿಕೆ ಆಗುತ್ತಿದೆ.

 

ರಾಜ್ಯ ಕೇಂದ್ರದ ಪಾಲು ಎಷ್ಟು?
ತೈಲದಿಂದಲೇ ರಾಜ್ಯಗಳಿಗೆ ಹೆಚ್ಚಿನ ಆದಾಯ ಬರುತ್ತದೆ. ಈ ಕಾರಣಕ್ಕೆ ತೈಲವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ರಾಜ್ಯಗಳು ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ ಪೆಟ್ರೋಲ್‌-ಡೀಸೆಲ್‌ನ ತೆರಿಗೆ ಪಾಲಿನಲ್ಲಿ ಅಧಿಕ ಪಾಲು ರಾಜ್ಯಗಳಿಗೆ ಹೋಗುತ್ತದೆ.

ಉದಾಹರಣೆಗೆ ಒಂದು ಲೀಟರ್‌ ಪೆಟ್ರೋಲ್‌ ಬೆಲೆ 90 ರೂ. ಇದ್ದರೆ ಇದರಲ್ಲಿ ಕೇಂದ್ರ ಸರಕಾರಕ್ಕೆ 32 ರೂ. ಅಬಕಾರಿ ಸುಂಕದ ರೂಪದಲ್ಲಿ ಸಿಗುತ್ತದೆ. ಸಿಕ್ಕಿದ ಹಣದಲ್ಲಿ ಶೇ.70ರಷ್ಟು ರಾಜ್ಯಗಳಿಗೆ ಮರು ಹಂಚಿಕೆಯಾಗುತ್ತದೆ. ಇದರಿಂದಾಗಿ ಕೇಂದ್ರ ಕೇಂದ್ರ ಸರ್ಕಾರಕ್ಕೆ 10 ರಿಂದ 13 ರೂ. ಮಾತ್ರ ಸಿಗುತ್ತದೆ. ರಾಜ್ಯಗಳಿಗೆ ವ್ಯಾಟ್‌ ಮತ್ತು ಕೇಂದ್ರೀಯ ಅಬಕಾರಿ ಸುಂಕದ ಪಾಲು ಸೇರಿ ಒಟ್ಟು 40-42 ರೂ. ತೆರಿಗೆ ಆದಾಯ ಸಿಗುತ್ತದೆ.

Click to comment

Leave a Reply

Your email address will not be published. Required fields are marked *