Wednesday, 23rd October 2019

Recent News

ಅಧಿಕಾರ ಮಜಾ ಮಾಡೋವಾಗ ಕಾಂಗ್ರೆಸ್ ಚೆನ್ನಾಗಿತ್ತು, ಬೇಗ್ ಎಲ್ಲಿ ಬೇಕಾದ್ರೂ ಹೋಗ್ಬಹುದು: ಜಮೀರ್ ಅಹ್ಮದ್

ಬೆಂಗಳೂರು: ಮಾಜಿ ಸಚಿವ ರೋಷನ್ ಬೇಗ್ ತಮ್ಮ ಕಾಂಗ್ರೆಸ್ ನಾಯಕರ ವಿರುದ್ಧವೇ ಹೇಳಿಕೆಯನ್ನು ನೀಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. ತಮ್ಮ ಹೇಳಿಕೆಯಲ್ಲಿ ಪರೋಕ್ಷವಾಗಿ ಸಚಿವ ಜಮೀರ್ ಅಹ್ಮದ್ ಅವರನ್ನ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು. ಇದೀಗ ಜಮೀರ್ ಅಹ್ಮದ್, ಅಧಿಕಾರ ಓರ್ವ ವ್ಯಕ್ತಿಗೆ ಸೀಮಿತವಾಗಿರಬೇಕೆಂದು ಎಲ್ಲಿ ಬರೆದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಎಕ್ಸಿಟ್ ಪೋಲ್ ನಂಬಲು ಆಗಲ್ಲ. ಎಕ್ಸಿಟ್ ಪೋಲ್ ನಂಬಿ ಯಾಕೆ ಈ ರೀತಿ ಹೇಳಿಕೆ ನೀಡಿದ್ದಾರೆ ಎಂಬುವುದು ಗೊತ್ತಾಗುತ್ತಿಲ್ಲ. ರೋಷನ್ ಬೇಗ್ ಸಹ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿ ಎರಡು ಬಾರಿ ಸಚಿವರಾದರು. ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಿ ಎಸ್.ಎಂ.ಕೃಷ್ಣ ಕಾಲದಲ್ಲಿಯೂ ಸಚಿವರಾದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ರೋಷನ್ ಬೇಗ್ ಸಚಿವರಾಗಿದ್ದರು. ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ಮುಸ್ಲಿಂ ಸಮುದಾಯದಿಂದ ನನ್ನನ್ನು ಗುರುತಿಸಿ ಸಚಿವನನ್ನಾಗಿ ಮಾಡಿತು. ಪಕ್ಷ ಮಂತ್ರಿ ಮಾಡಿದಾಗ ಕಾಂಗ್ರೆಸ್ ಚೆನ್ನಾಗಿತ್ತು. ಲೋಕಸಭಾ ಚುನಾವಣೆಯಲ್ಲಿಯೂ ಎಂಪಿ ಟಿಕೆಟ್ ಕೇಳಿದ್ದರು. ಆದ್ರೆ ಪಕ್ಷ ನೀಡಲಿಲ್ಲ. ಹಾಗಾಗಿ ಈ ರೀತಿಯ ಹೇಳಿಕೆಗಳನ್ನು ರೋಷನ್ ಬೇಗ್ ನೀಡುತ್ತಿದ್ದಾರೆ ದೂರಿದರು.

ಬೆಂಗಳೂರು ಸೆಂಟ್ರಲ್‍ನಿಂದ ಯುವಕರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ನಿರ್ಧರಿಸಿ ರಿಜ್ವಾನ್ ಅರ್ಷದ್ ಅವರಿಗೆ ನೀಡಿತು. ಒಂದು ವೇಳೆ ಸೆಂಟ್ರಲ್ ನಿಂದ ಟಿಕೆಟ್ ನೀಡಿದ್ರೆ ರೋಷನ್ ಬೇಗ್ ಅವರಿಗೆ ಕಾಂಗ್ರೆಸ್ ಚೆನ್ನಾಗಿ ಕಾಣಿಸುತ್ತಿತ್ತು. ಅಧಿಕಾರ ಕೊಟ್ಟರೆ ಕಾಂಗ್ರೆಸ್ ಒಳ್ಳೆಯದು. ನೀಡದಿದ್ರೆ ಕೆಟ್ಟದ್ದು ಅಂತಾ ಹೇಳಿದರೆ ಯಾವ ನ್ಯಾಯ ಎಂದು ಜಮೀರ್ ಪ್ರಶ್ನಿಸಿದರು.

ಮುಸ್ಲಿಂ ಸಮುದಾಯದ ಯಾವ ನಾಯಕರು ಬಿಜೆಪಿಗೆ ಹೋಗಲ್ಲ. ಕಾರಣ ಬಿಜೆಪಿಗೆ ಮುಸ್ಲಿಂ ಸಮುದಾಯದ ಮತಗಳು ಬೇಡ. ಬಿಜೆಪಿ ಸೇರೋದು ರೋಷನ್ ಬೇಗ್ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ರೋಷನ್ ಬೇಗ್ ಸ್ವತಂತ್ರರಾಗಿದ್ದು, ಎಲ್ಲಿ ಬೇಕಾದರೂ, ಯಾವ ಪಕ್ಷವಾದರೂ ಸೇರ್ಪಡೆಯಾಗಬಹುದು. ಅಧಿಕಾರವನ್ನು ಮಜಾ ಮಾಡುವಾಗ ಕಾಂಗ್ರೆಸ್ ಚೆನ್ನಾಗಿತ್ತು. ಇದೀಗ ಚೆನ್ನಾಗಿಲ್ಲ ಅಂದ್ರೆ ಏನ್ ಹೇಳೋಣ ಎಂದು ವ್ಯಂಗ್ಯ ಮಾಡಿದರು.

ನಾನು ಅವರಂತೆಯೇ ಜನತಾದಳದಿಂದ ಕಾಂಗ್ರೆಸ್‍ಗೆ ಬಂದವನು. ನಾನೇನು ಬೇಗ್ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿಲ್ಲ. ಯಾರು ಸಹ ಯಾರ ಅಧಿಕಾರವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಕನಸಿನಲ್ಲಿಯೂ ನನ್ನನ್ನು ಮಂತ್ರಿ ಮಾಡ್ತಾರೆ ಎಂದು ಯೋಚಿಸಿರಲಿಲ್ಲ. ಪಕ್ಷದಲ್ಲಿ ನನಗಿಂತ ಹಿರಿಯರಾದ ರೋಷನ್ ಬೇಗ್, ತನ್ವೀರ್ ಸೇಠ್ ಇದ್ದಿದರಿಂದ ಮಂತ್ರಿ ಮಾಡಿ ಅಂತ ಕೇಳೋದಕ್ಕೆ ಹೋಗಿರಲಿಲ್ಲ. ಪಕ್ಷ ತನ್ನ ಸರ್ವೇಯಲ್ಲಿ ಮುಸ್ಲಿಂ ಸಮಾಜ ನನ್ನ ಮೇಲೆ ಪ್ರೀತಿ ಇಟ್ಟುಕೊಂಡಿದ್ದನ್ನು ಗಮನಿಸಿ ಮಂತ್ರಿ ಮಾಡಿದರು. ಪ್ರತಿಬಾರಿಯೂ ಒಬ್ಬರಿಗೆ ಅವಕಾಶಗಳು ಸಿಗಬೇಕೆಂದು ಎಲ್ಲಿಯೂ ಬರೆದಿಲ್ಲ. ಈ ಹಿಂದೆ ಹಲವು ಬಾರಿ ಮಂತ್ರಿಯಾಗಿ ರೋಷನ್ ಬೇಗ್ ಕೆಲಸ ಮಾಡಿದ್ದಾರೆ. ನನ್ನ 20 ತಿಂಗಳ ಅಧಿಕಾರ ಮುಗಿದ ಕೂಡಲೇ ಶಾಸಕ ಹ್ಯಾರಿಸ್ ಅವರನ್ನು ಮಂತ್ರಿ ಮಾಡಬೇಕೆಂದು ಯೋಚಿಸುತ್ತಿದ್ದೇನೆ. ಅಧಿಕಾರ ಕೇವಲ ಓರ್ವ ವ್ಯಕ್ತಿಗೆ ಸೀಮಿತ ಅಲ್ಲ ಎಂದು ಹೇಳುವ ರೋಷನ್ ಬೇಗ್‍ಗೆ ಟಾಂಗ್ ಕೊಟ್ಟರು.

Leave a Reply

Your email address will not be published. Required fields are marked *